ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯಾಗುತ್ತಿರುವ ಶ್ರೀ ರಾಮಲಲ್ಲಾ ಮೂರ್ತಿಗೆ ಕಲ್ಲು ಸಿಕ್ಕ ಸ್ಥಳವಾದ ಮೈಸೂರು ಜಿಲ್ಲೆಯಲ್ಲಿಯೂ ಸಂಭ್ರಮ ಮನೆ ಮಾಡಿದೆ. ಆಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗೆ ಜಿಲ್ಲೆಯ ಶಿಲೆ ಅನ್ನುವ ಹೆಮ್ಮೆ ಒಂದು ಕಡೆಯಾದರೆ, ನಮ್ಮೂರಿನ ಶಿಲ್ಪಿ ಕೆತ್ತನೆ ಮಾಡಿದ್ದು ಅನ್ನೋದು ಮತ್ತೊಂದು ಹೆಮ್ಮೆ.ಇದೀಗ ಮೈಸೂರಿನಲ್ಲಿ ಶಿಲೆ ಸಿಕ್ಕ ಜಾಗ ಹಾರೋಹಳ್ಳಿ- ಗುಜ್ಜೆ ಗೌಡನಪುರದ ದಲಿತ ವ್ಯಕ್ತಿ ರಾಮದಾಸು ಅವರ ಜಮೀನಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಾಸಕ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.
ನಿಮಗೆಲ್ಲಾ ತಿಳಿದಿರುವಂತೆ ರಾಮಲಲ್ಲಾ ನಿರ್ಮಾಣಕ್ಕೆ ಕಲ್ಲು ಸಿಕ್ಕ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಸಿದ್ದತೆ ಮಾಡಲಾಗಿದೆ. ಜಮೀನಿನ ಮಾಲೀಕರಾದ ರಾಮದಾಸ್ ಹಾಗೂ ಕಲ್ಲು ಕಳುಹಿಸಿಕೊಟ್ಟ ಶ್ರೀನಿವಾಸ್ ಕೂಡ ಭಾಗಿಯಾಗಿದ್ದಾರೆ. ಸ್ಥಳದಲ್ಲಿ ಚಪ್ಪರ ಹಾಕಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಕಾಡಿನಂತೆ ಇದ್ದ ಪ್ರದೇಶದಲ್ಲಿ ಕಲ್ಲು ಸಿಕ್ಕಿದ್ದು, ಇದೀಗ ಇದೇ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ.
ಮೈಸೂರಿನ ರಾಮದಾಸ್ ಅವರ ಜಮೀನಿನಲ್ಲಿ ದೊರೆತ 10 ಅಡಿ ಅಳತೆಯ ಮೂರು ಬೃಹತ್ ಬಂಡೆಗಳಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಬಾಲ ರಾಮ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ. ಈಗ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕ ಶಿಲೆಯಿಂದ ಜಗತ್ತೇ ನಮಿಸುವಂತಹ ಶ್ರೀರಾಮಲಲ್ಲಾನ ವಿಗ್ರಹ ರಚನೆಯಾಗಿದ್ದು, ಅದನ್ನು ಇಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.