ನ್ಯೂಸ್ ನಾಟೌಟ್: ಜೈಲಿನಲ್ಲಿ ಕುಳಿತು ದೇಶದ ವಿರುದ್ಧ ಪಿತೂರಿ ಹಾಗೂ ‘ಫಿದಾಯೀನ್’ (ಆತ್ಮಹತ್ಯೆ) ದಾಳಿಯ ಸಂಚು ಪ್ರಕರಣದಲ್ಲಿ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಯ ಎಂಟು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಇದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಓರ್ವ ಮತ್ತು ತಲೆಮರೆಸಿಕೊಂಡಿರುವ ಇಬ್ಬರನ್ನೂ ಹೆಸರಿಸಲಾಗಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಟಿ.ನಜೀರ್, ಜುನೈದ್ ಅಹ್ಮದ್, ಸಲ್ಮಾನ್ ಖಾನ್, ಸೈಯ್ಯದ್ ಸುಹೈಲ್ ಖಾನ್, ಮೊಹಮ್ಮದ್ ಉಮರ್, ಜಾಹೀದ್ ತಬ್ರೇಜ್, ಸೈಯ್ಯದ್ ಮುದಾಸಿರ್ ಪಾಶಾ ಮತ್ತು ಮೊಹಮ್ಮದ್ ಫೈಸಲ್ ರಬ್ಬಾನಿ ವಿರುದ್ಧ ಭಾರತೀಯ ದಂಡ ಸಂಹಿತೆ, ಯುಎಪಿಎ ಕಾಯ್ದೆ, ಸ್ಪೋಟಕ ಹಾಗೂ ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಎನ್ಐಎ ಈ ಚಾರ್ಜ್ಶೀಟ್ ದಾಖಲಿಸಿದೆ.
ಈ ಪೈಕಿ ಟಿ.ನಜೀರ್ ಜೀವಾವಧಿ ಶಿಕ್ಷೆಗೆ ಗುರಿಯಾಗಿ 2013ರಿಂದಲೂ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಜುನೈದ್ ಅಹಮದ್, ಸಲ್ಮಾನ್ ಖಾನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಉಳಿದಂತೆ ಇತರರು ಸಹ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ.
ಕಳೆದ ವರ್ಷ ಜುಲೈ 18ರಂದು ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳು ವಾಸವಿದ್ದ ಮನೆಯೊಂದರ ಮೇಲೆ ದಾಳಿ ಮಾಡಿದ್ದರು. ಆಗ ಶಸ್ತ್ರಾಸ್ತ್ರ, ಹ್ಯಾಂಡ್ ಗ್ರೆನೇಡ್, ವಾಕಿ ಟಾಕಿಗಳ ಸಹಿತ ಏಳು ಜನರನ್ನ ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿತ್ತು.
ಎನ್ಐಎ ತನಿಖೆಯಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. 2017ರಲ್ಲಿ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಸಲ್ಮಾನ್ ಖಾನ್ ಹಾಗೂ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಉಳಿದ ಆರೋಪಿಗಳಿಗೆ ಜೈಲಿನಲ್ಲೇ ಟಿ.ನಜೀರ್ ಸಂಪರ್ಕಕ್ಕೆ ಬಂದಿದ್ದ. ಜೈಲಿನಲ್ಲಿ ಎಲ್ಲರನ್ನೂ ತನ್ನ ಬ್ಯಾರಕ್ಗೆ ಶಿಫ್ಟ್ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನಜೀರ್, ಆರಂಭದಲ್ಲಿ ಜುನೈದ್ ಅಹಮದ್, ಸಲ್ಮಾನ್ ಖಾನ್ ಹಾಗೂ ನಂತರದಲ್ಲಿ ಉಳಿದ ಆರೋಪಿಗಳನ್ನು ಲಷ್ಕರ್ ಎ ತೊಯ್ಬಾಗೆ ಸಂಘಟನೆಯ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿ ತಿಳಿಸಿದೆ.