ನ್ಯೂಸ್ ನಾಟೌಟ್ : ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಇಡೀ ದೇಶವೇ ಎದುರು ನೋಡುತ್ತಿದೆ. ಇದೀಗ ಸುಂದರವಾಗಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರ ಒಂದಲ್ಲ,ಒಂದು ಹೊಸ ವಿಷಯದಿಂದ ಸುದ್ದಿಯಾಗುತ್ತಲೇ ಇದೆ. ಹಲವು ವಿಶೇಷತೆಗಳಿಂದಲೇ ಈ ರಾಮಮಂದಿರ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.ಬಂಗಾರದ ಬಾಗಿಲುಗಳು, ದೇಶದಲ್ಲೇ ಅತ್ಯಂತ ದೊಡ್ಡ ಘಂಟೆ, 22 ಭಾಷೆಗಳಲ್ಲಿ ಸೂಚನ ಫಲಕ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯತೆಗಳನ್ನೊಳಗೊಂಡಿದೆ. ಈ ಎಲ್ಲದರ ಮಧ್ಯೆ ರಾಮನೂರಿನಲ್ಲಿ ಕನ್ನಡದ ಹಾಡಿನ ಕಲರವ ಮೊಳಗಲಿದೆ ಅನ್ನೋದು ಕನ್ನಡಿಗರು ಹೆಮ್ಮೆ ಪಡುವಂತ ವಿಷಯವಾಗಿದೆ.
ಹೌದು,ಈಗಾಗ್ಲೇ ನೀವು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಎನ್ನುವ ಹಾಡನ್ನು ಕೇಳಿರುತ್ತೀರಿ. ಇದೀಗ ಇದೇ ಹಾಡು ಅಯೋಧ್ಯೆಯಲ್ಲಿ ರಾರಾಜಿಸಲಿದೆ. ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎನ್ನುವ ಕನ್ನಡ ಹಾಡು ಪ್ಲೇ ಆಗಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಗೀತೆ ರಚನಾಕಾರ ಗಜಾನನ ಶರ್ಮಾ ಫುಲ್ ಖುಷ್ ಆಗ್ಬಿಟ್ಟಿದ್ದಾರೆ. ಹಲವು ವರ್ಷಗಳ ಹಿಂದೆ ಬರೆದ ಹಾಡು ಈಗ ಸದ್ದು ಮಾಡ್ತಾ ಇರೋದಕ್ಕೆ ಭಾರಿ ಸಂತಸ ವ್ಯಕ್ತ ಪಡಿಸಿದ್ದಾರೆ.ಇಷ್ಟು ಸಮಯ ಪಟ್ಟ ಶ್ರಮಕ್ಕೆ ನಿಜವಾದ ಗೌರವ ಇವಾಗ ಸಂದಿದೆ ಎನ್ನುವ ಸಾರ್ಥಕತೆ ಅವರಲ್ಲಿದೆ.
ಈ ಬಗ್ಗೆ ಮಾತನಾಡಿರುವ ಗಜಾನನ ಶರ್ಮಾ ಅವರು ತಮ್ಮ ಮನದಾಳದ ಮಾತುಗಳನ್ನು ತೆರೆದಿಟ್ಟಿದ್ದಾರೆ. ” ನಿಜವಾಗ್ಲೂ ಇದೊಂದು ಸಂತಸದ ಕ್ಷಣ. ಈ ಸುದ್ದಿ ಕೇಳಿ ನನ್ನ ಆನಂದಕ್ಕೆ ಪಾರವೇ ಇಲ್ಲದಂತೆ ಆಗಿದೆ. ರಾಮಚಂದ್ರಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಮಾತಿನಿಂದ ಈ ಗೀತೆ ಬರೆಯಲಾಯಿತು. ರಾಮಮಂದಿರ ಉದ್ಘಾಟನಾ ದಿನ ಪ್ಲೇ ಮಾಡುತ್ತಾರೋ, ಇಲ್ವೋ ಗೊತ್ತಿಲ್ಲ. ಅಯೋಧ್ಯೆಯಲ್ಲಿ ಹಾಡು ಮೊಳಗುತ್ತಿರುವುದು ತುಂಬಾ ಖುಷಿ ಸಂಗತಿ ಎಂದು ಹೇಳಿದ್ದಾರೆ.
ಅಂದ ಹಾಗೆ ಗಜಾನನ ಶರ್ಮಾ ಅವರು ಮೂಲತಃ ಉತ್ತರ ಕರ್ನಾಟಕದವರಾದರೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಇವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದಾರೆ. ಇವರು ಸಾಹಿತಿಯೂ ಹೌದು, ನಟರೂ ಹೌದು, ನಾಟಕಕಾರರೂ ಕೂಡ. ಇಷ್ಟೆಲ್ಲ ಆಗಿರೋ ಇವರು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನ ರಚಿಸಿದ್ದಾರೆ.