ನ್ಯೂಸ್ ನಾಟೌಟ್: ಮೂವರು ಸಾಧುಗಳನ್ನು ಅಪಹರಣಕಾರರೆಂದು ಶಂಕಿಸಿ, ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಎಂಬ ಜಿಲ್ಲೆಯಲ್ಲಿ ನಡೆದಿದೆ. ಈ ಸಾಧುಗಳು ಉತ್ತರ ಪ್ರದೇಶ ಮೂಲದವರು ಎಂದು ವರದಿ ತಿಳಿಸಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಸಾಧುಗಳನ್ನು ಅಪಹರಣಕಾರರೆಂದು ಶಂಕಿಸಿ ಗುಂಪು ಥಳಿಸಿದ್ದು, ಈ ಘಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ 12 ಜನರನ್ನ ಬಂಧಿಸಲಾಗಿದ್ದು, ಆರೋಪಿಗಳನ್ನು ಪುರುಲಿಯಾ ಜಿಲ್ಲೆಯ ಕೋರ್ಟ್ಗೆ ಹಾಜರುಪಡಿಸುದಾಗಿ ಪೊಲೀಸರು ತಿಳಿಸಿದ್ದಾರೆ.
ಗಂಗಾಸಾಗರದಲ್ಲಿ ಮಕರ ಸಂಕ್ರಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಹಿರಿಯ ಸಾಧು ಮತ್ತು ಅವರ ಇಬ್ಬರು ಪುತ್ರರು ಬಾಡಿಗೆ ವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಮಹಿಳೆಯರ ಗುಂಪನ್ನು ಸಂಪರ್ಕಿಸಿ ಗಂಗಾಸಾಗರಕ್ಕೆ ತೆರಳಲು ದಾರಿ ಕೇಳಿದ್ದಾರೆ. ಇದರಿಂದ ಕೆಲವು ಸ್ಥಳೀಯರಲ್ಲಿ ಅನುಮಾನ ವ್ಯಕ್ತವಾಗಿದೆ. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಸೇರಿದ ಜನರ ಗುಂಪು, ಸಾಧುಗಳನ್ನ ಅಪಹರಣಕಾರರು ಎಂದು ದೂರಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಸಾಧುಗಳು ಮತ್ತು ಮೂವರು ಸ್ಥಳೀಯ ಹೆಣ್ಣುಮಕ್ಕಳ ನಡುವೆ ಭಾಷೆ ಸಮಸ್ಯೆಯಿಂದಾಗಿ ತಪ್ಪು ತಿಳಿವಳಿಕೆ ಉಂಟಾಗಿತ್ತು. ಸಾಧುಗಳ ಮಾತನ್ನು ಅರ್ಥಮಾಡಿಕೊಳ್ಳದೇ ಹೆಣ್ಣುಮಕ್ಕಳು ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳೀಯರು ಸಾಧುಗಳನ್ನು ಹಿಡಿದು ಥಳಿಸಿದ್ದಾರೆ.
ಅಲ್ಲದೇ ಸಾಧುಗಳ ವಾಹವನ್ನೂ ಧ್ವಂಸಗೊಳಿಸಿದ್ದಾರೆ ಎಂದು ಪುರುಲಿಯಾ ಪೊಲೀಸರು ತಿಳಿಸಿದ್ದಾರೆ. ನಂತರ ಸಾಧುಗಳನ್ನು ರಕ್ಷಿಸಿ, ಕಾಸಿಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.