ಅರ್ಜುನನ ಅಂತ್ಯಕ್ಕೆ ಕಾರಣವಾಗಿದ್ದ ಒಂಟಿ ಸಲಗ ಸೆರೆ, ಅಭಿಮನ್ಯು ತಂಡದ ಸಾಹಸ ಹೇಗಿತ್ತು?

ನ್ಯೂಸ್ ನಾಟೌಟ್‌: ದಸರಾ ಆನೆ ಅರ್ಜುನನ ಒಂಟಿ ಸಲಗ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕೊನೆಯುಸಿರೆಳೆ ಘಟನೆ ನಡೆದ ಬಳಿಕ ಭೀತಿ ಹುಟ್ಟಿಸಿದ್ದ ಒಂಟಿ ಸಲಗದ ಹೆಡೆಮುರಿ ಕಟ್ಟುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಚಾಲನೆ ನೀಡಿದ್ದು, ಸಾರಾಮಾರ್ಟಿನ್ ಎಂದು ಕರೆಯಲಾಗುತ್ತಿದ್ದ ಕಾಡಾನೆಯನ್ನು ‘ಅಭಿಮನ್ಯು ನೇತೃತ್ವದ ಆನೆಗಳ ತಂಡ ಸೆರೆ ಹಿಡಿದಿವೆ ಎಂದು ವರದಿ ತಿಳಿಸಿದೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಮತ್ತು ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಭಯದ ವಾತಾವರಣ ನಿರ್ಮಿಸಿದ್ದ ‘ಸಾರಾ ಮಾರ್ಟಿನ್’ ಹೆಸರಿನ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ(ಜ.೧೪) ಸೆರೆ ಹಿಡಿದಿದ್ದಾರೆ. ಅರ್ಜುನ ಆನೆ ಸಾವಿನ ಬಳಿಕ ಕೊನೆಗೂ ಅರಣ್ಯ ಇಲಾಖೆ ಈ ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ಕಾಡಾನೆಯನ್ನು ನಾಗರಹೊಳೆಯ ಮತ್ತಿಗೋಡು ಆನೆ ಕ್ಯಾಂಪ್‍ಗೆ ಲಾರಿಯಲ್ಲಿ ಸಾಗಿಸಲಾಗಿದ್ದು, ಅಲ್ಲಿಯೇ ಅದನ್ನು ತರಬೇತಿಗೆ ಹಾಕುವ ಕುರಿತು ಅರಣ್ಯ ಇಲಾಖೆ ನಿರ್ಧರಿಸಲಿದೆ ಎನ್ನಲಾಗಿದೆ. ಆನೆ ಸೆರೆಗೆ ಜನವರಿ12ರಿಂದ ಬೇಲೂರು ತಾಲ್ಲೂಕು ಬಿಕ್ಕೋಡು ಗ್ರಾಮದಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆ ಉಪ ನಿರ್ದೇಶಕ ಸೌರಭ್ ಕುಮಾರ್ ನೇತೃತ್ವದಲ್ಲಿ, ತಾಲ್ಲೂಕಿನ ಪಾಳ್ಯ ಹೋಬಳಿ ನಲ್ಲೂರು ಹಾಗೂ ಮುದ್ದನಾಯ್ಕನಹಳ್ಳಿಪುರ ಗ್ರಾಮಕ್ಕೆ ಸೇರಿದ ಸಹರಾ ಎಸ್ಟೇಟ್‍ನಲ್ಲಿ ಪ್ರಾರಂಭಿಸಲಾಯಿತು. ಕೊಡಗು ಜಿಲ್ಲೆಯ ದುಬಾರೆ ಹಾಗೂ ಮತ್ತಿಗೋಡಿನಿಂದ ಬಂದಿದ್ದ ದಸರಾ ಆನೆ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮಾ, ಹರ್ಷ, ಅಶ್ವಥ್ಥಾಮ ಮತ್ತು ಮಹೇಂದ್ರ ಎಂಬ ಎಂಟು ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.