ನ್ಯೂಸ್ ನಾಟೌಟ್ :ಮಡಿಕೇರಿ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳಿಂದಾಗಿ ರೈತರು ಕಂಗಾಲಾಗಿರುವುದರ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇದೆ.ಇದೀಗ ಆ ವ್ಯಾಪ್ತಿಯಲ್ಲಿ ಒಂಟಿ ಸಲಗದ ಕಾಟ ಅತಿಯಾಗಿದೆ.ಸಲಗವೊಂದು ಮಧ್ಯರಾತ್ರಿ ಶಬರಿಮಲೆಗೆ ತೆರಳುತ್ತಿದ್ದವರನ್ನ ತಡೆದಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ದೇವಸ್ಥಾನದ ಬಳಿ ನಡೆದಿದೆ.
ಇದು ಅರಣ್ಯ ಪ್ರದೇಶವಾದ್ದರಿಂದ ಆನೆಗಳ ಓಡಾಟ ಹೆಚ್ಚಿರುತ್ತೆ.ಆಶ್ಚರ್ಯ ಏನಂದ್ರೆ ದಾಳಿ ಮಾಡಲು ಬಂದ ಕಾಡಾನೆ ಮಿನಿ ಬಸ್ಗೆ ಹಾಕಲಾಗಿದ್ದ ಹೂವಿನ ಹಾರಗಳನ್ನ ಕಿತ್ತುಕೊಂಡು ತಲೆ ಮೇಲೆ ಹಾಕಿಕೊಂಡು ಹೋಗಿದೆ ಎನ್ನುವ ವಿಡಿಯೋವೊಂದು ವೈರಲ್ ಆಗಿದೆ.ಅಯ್ಯಪ್ಪ ಮಾಲಾಧಾರಿಗಳು ಸೋಮವಾರಪೇಟೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಮಿನಿ ಬಸ್ನಲ್ಲಿ ತೆರಳುತ್ತಿದ್ದರು. ಬಸ್ ತಿತಿಮತಿ ದೇವಸ್ಥಾನ ಬಳಿ ರಾತ್ರಿ ಬರುತ್ತಿದ್ದಂತೆ ಏಕಾಏಕಿ ಎದುರಾದ ಕಾಡಾನೆ ಬಸ್ ಬಳಿಗೆ ಬಂದಿದೆ.
ಈ ಸಂದರ್ಭ ಬಸ್ನಲ್ಲಿದ್ದ ಅಯ್ಯಪ್ಪನ ಭಕ್ತರು ಕಾಡಾನೆ ಹತ್ತಿರ ಬರುತ್ತಿದ್ದಂತೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಮಂತ್ರ ಜಪಿಸಿದ್ದಾರೆ. ಬಳಿಕ ಕಾಡಾನೆಗೆ ಅದು ಏನಾಯ್ತೋ ಗೊತ್ತಿಲ್ಲ. ಬಸ್ ಮುಂಭಾಗ ಹಾಕಲಾಗಿದ್ದ ಹೂವಿನ ಹಾರಗಳನ್ನು ತನ್ನ ಸೊಂಡಿಲಿನಿಂದ ಕಿತ್ತು ತಲೆ ಮೇಲೆ ಹಾಕಿಕೊಂಡಿದೆ. ಹೂವಿನ ಹಾರಗಳನ್ನು ತಲೆ ಮೇಲೆ ಹಾಕಿಕೊಂಡ ಆನೆ ಅಯ್ಯಪ್ಪನ ಭಕ್ತರಿಗೆ ಆಶೀರ್ವಾದ ಮಾಡಿ ಸುಮ್ಮನೆ ಹೊರಟಿದೆ.
ಆನೆ ಬರುತ್ತಿದ್ದಂತೆ ಬಸ್ನಲ್ಲಿದ್ದ 25 ರಿಂದ 30 ಮಾಲಾಧಾರಿಗಳು ಭಯಭೀತರಾಗಿದ್ದರು. ಸದ್ಯ ಕಾಡಾನೆ ಅಯ್ಯಪ್ಪ ಮಾಲಾಧಾರಿಗಳಿಗೆ ಎದುರಾದ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡಿದ ಅಯ್ಯಪ್ಪನ ಭಕ್ತರು, ಇದೆಲ್ಲಾ ಸ್ವಾಮಿ ಅಯ್ಯಪ್ಪನ ಮಹಿಮೆ ಎಂದು ಕೊಂಡಾಡಿದ್ದಾರೆ.