ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಅಜ್ಜಾವರ ವಲಯದ ಮೇನಾಲ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೂರು ಮಂದಿ ಬಡ ಮಹಿಳೆಯರೇ ಇರುವ ನೊಂದ ಕುಟುಂಬಕ್ಕೆ ನೆರವು ನೀಡಲಾಯಿತು.ಇದೇ ಸಂದರ್ಭದಲ್ಲಿ ಮಾಸಾಶನ ಪಡೆಯುತ್ತಿರುವ ವಾತ್ಸಲ್ಯ ಸದಸ್ಯರಾದ ಭಾಗೀರಥಿ ಮನೆಯಲ್ಲಿ ರಾಮೋತ್ಸವ ದೀಪಾವಳಿ ಆಚರಣೆ ಕೂಡ ಅದ್ದೂರಿಯಾಗಿ ನೆರವೇರಿತು.
ಈ ವೇಳೆ ವಾತ್ಸಲ್ಯ ಮನೆ ರಚನೆಯ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ಮನೆ ರಿಪೇರಿಯ ಕೆಲಸ ಮತ್ತು ನೀರಿನ ಟ್ಯಾಂಕ್ ಗಾಗಿ ಸುಭೋದ ಶೆಟ್ಟಿ ಮೇನಾಲ ಅವರು ಚಾಲನೆ ನೀಡಿದರು.ಮೂರು ಮಂದಿ ಬಡಮಹಿಳೆಯರೇ ಇದ್ದ ಕುಟುಂಬದಲ್ಲಿ ಭಾರಿ ಸಂಕಷ್ಟ ಎದುರಾಗಿತ್ತು.ಅವರಲ್ಲಿ ಭಾಗಿರತಿರವರಿಗೆ ಹಲವು ವರ್ಷಗಳಿಂದ ಪ್ರತಿ ತಿಂಗಳಿಗೆ ಮಾಸಾಶನ ಸೌಲಭ್ಯ ಸೇರಿದಂತೆ ಆಹಾರದ ಕಿಟ್, ವಸ್ತ್ರ, ಗೃಹಪಯೋಗಿ ವಸ್ತುಗಳನ್ನು ಕ್ಷೇತ್ರದ ವತಿಯಿಂದ ನೀಡಲಾಗುತ್ತಿತ್ತು.ಆದರೆ ಇವರ ಮನೆಯಲ್ಲಿ ಒಬ್ಬ ಮಹಿಳೆ ವಿಶೇಷಚೇತನರಾಗಿದ್ದು, ಮಲಗಿದಲ್ಲೇ ಇದ್ದಾರೆ. ಇನ್ನೊಬ್ಬರು ಮಹಿಳೆ ಎರಡು ಕಣ್ಣು ಕಾಣದೇ ವಯೋವೃದ್ದೆಯಾಗಿದ್ದಾರೆ.ಮತ್ತೊಬ್ಬರು ಮಹಿಳೆ ಇವರಿಬ್ಬರ ದಿನಚರಿಯ ಕೆಲಸವನ್ನು ಮಾಡಿಕೊಂಡು ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದಾರೆ.
ಈ ಹಿನ್ನಲೆಯಲ್ಲಿ ಕೇವಲ ಮಹಿಳೆಯರು ಮಾತ್ರವೇ ಇರುವ ಈ ಮನೆಯಲ್ಲಿ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆಯ ರಾಮೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕ್ಷೇತ್ರದ ವತಿಯಿಂದ ವಾತ್ಸಲ್ಯ ಮನೆ ರಚನೆಯ ಕಾರ್ಯಕ್ರಮದಡಿಯಲ್ಲಿ ಕಡು ಬಡವರಾಗಿರುವ ಇವರಿಗೆ ಮನೆ ರಿಪೇರಿ ,ಶೌಚಾಲಯ ರಿಪೇರಿ ಹಾಗೂ ನೀರಿನ ಟ್ಯಾಂಕ್ ರಚನೆಯ ವ್ಯವಸ್ಥೆಗೆ ಬೇಕಾದ ಸಹಾಯಧನ ಮಂಜೂರಾಗಿದ್ದು ಮನೆ ರಿಪೇರಿ ಕೆಲಸದ ಚಾಲನೆಯನ್ನು ಕೂಡ ಮಾಡಲಾಯಿತು.
ಈ ಸಂದರ್ಭ ವಲಯದ ನಿಕಟ ಪೂರ್ವ ಜನಜಾಗೃತಿ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಕಾರ್ಯಕ್ಷೇತ್ರದ ಗಣ್ಯ ವ್ಯಕ್ತಿಯಾದ ರಾಜೇಶ್ ರೈ ಮೇನಾಲ, ಬಾಲಕೃಷ್ಣ ,ವಲಯ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಭಾರತಿ ವಲಯದ ಮೇಲ್ವಿಚಾರಕರು ವಿಶಾಲ ಒಕ್ಕೂಟದ ಅಧ್ಯಕ್ಷರು ಅರ್ಚನಾ ಮತ್ತು ಮಮತಾ ಇವರ ವತಿಯಿಂದ ಈ ಮನೆಗೆ ರಾಮನ ಫೋಟೋ ಮತ್ತು ಧ್ವಜವಿತರಣೆ ಮಾಡಿದರು.ಈ ಸಂದರ್ಭ ಶೌರ್ಯ ವಿಪತ್ತು ಘಟಕದ ಸದಸ್ಯರು ಸ್ಥಳೀಯ ಸೇವಾ ಪ್ರತಿನಿಧಿ ಕುಮಾರಿ ಅರ್ಪಿತ, ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.