ನ್ಯೂಸ್ ನಾಟೌಟ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾಮಿಲಿ ಮ್ಯಾಟರ್ ಆಗಾಗ ಚರ್ಚೆಗಳು ನಡಿಯುತ್ತಲೇ ಇತ್ತು. ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಕೆಲವು ಸಂದರ್ಭಗಳಲ್ಲಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದರು. ಯಾರೊಬ್ಬರ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದರು.ಆದರೆ,ಇದೀಗ ವಿಜಯ ಲಕ್ಷ್ಮೀಯವರ ತಾಳ್ಮೆಯ ಕಟ್ಟೆ ಒಡೆದಿದೆ. ಅವರು ಈ ಬಾರಿ ಜೋರಾಗಿಯೇ ಧ್ವನಿಯೇರಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡ ಹೆಸರನ್ನು ಉಲ್ಲೇಖಿಸಿಯೇ ವಿಜಯಲಕ್ಷ್ಮೀ ಅವರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ವಿಜಯಲಕ್ಷ್ಮೀ ಇದೀಗ ಏಕಾಏಕಿ ಕೆಂಡ ಮಂಡಲರಾಗಲು ಕಾರಣವೂ ಇದೆ. ಅದೇನೆಂದರೆ, ಪವಿತ್ರಾ ಗೌಡ ಎಂಬಾಕೆ ದರ್ಶನ್ ಕುರಿತಾಗಿ ಮಾಡಿರುವ ಆ ಒಂದು ಪೋಸ್ಟ್. ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ ಪೂರೈಸಿದೆ. ಥ್ಯಾಂಕ್ ಯು ಎಂದು ಹೇಳಿ ದರ್ಶನ್ ಜತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡು ಇನ್ಸ್ಟಾಗ್ರಾಂನಲ್ಲಿ ದರ್ಶನ್ಗೂ ಟ್ಯಾಗ್ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಇನ್ಸ್ಟಾಗ್ರಾಂ ಮೂಲಕ ಧ್ವನಿ ಎತ್ತಿದ್ದು, ದೂರು ನೀಡುವುದಾಗಿ ಪವಿತ್ರಾ ಗೌಡಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಏನಂದ್ರು ವಿಜಯಲಕ್ಷ್ಮೀ: ಬೇರೊಬ್ಬರ ಪತಿಯ ಫೋಟೋವನ್ನು ಪೋಸ್ಟ್ ಮಾಡುವ ಮುನ್ನ ಈ ಮಹಿಳೆ(ಪವಿತ್ರಾ ಗೌಡ) ಗೆ ತನ್ನ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ರೀತಿ ಪೋಸ್ಟ್ ಮಾಡುವುದು ಆಕೆಯ ವ್ಯಕ್ತಿತ್ವ, ನಡತೆ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಆ ಪುರುಷ ವಿವಾಹಿತನಾಗಿದ್ದರೂ ಆಕೆ ಇನ್ನೂ ಕೂಡ ತನ್ನ ವೈಯಕ್ತಿಕ ಅಗತ್ಯತೆಗಳು ಮತ್ತು ಅಜೆಂಡಾ ಈಡೇರಿಕೆಗಾಗಿ ಅದನ್ನೇ ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾಳೆ. ಖುಷಿ ಗೌಡ, ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಮಗಳು ಎಂಬುದನ್ನು ಈ ಫೋಟೋಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ನನ್ನ ಕುಟುಂಬ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ. ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಮಾಜಕ್ಕೆ ಬೇರೆ ಕಲ್ಪನೆ ಬಿತ್ತುತ್ತಿರುವ ಜನರ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಫೋಟೋಗಳ ಸಮೇತ ಖಡಕ್ ಎಚ್ಚರಿಕೆ ನೀಡಿರುವ ವಿಜಯಲಕ್ಷ್ಮೀ, ಸಂಜಯ್ ಸಿಂಗ್, ಖುಷಿಗೌಡ ಹಾಗೂ ಪವಿತ್ರಾ ಗೌಡಗೆ ಟ್ಯಾಗ್ ಮಾಡಿದ್ದಾರೆ.
ವಿಜಯಲಕ್ಷ್ಮೀ ಮಾಡಿರುವ ಪೋಸ್ಟ್ಗೆ ಇದೀಗ ನೆಟ್ಟಿಗರು ಬಾರಿ ಬೆಂಬಲ ಸೂಚಿಸಿದ್ದಾರೆ.ಪವಿತ್ರಾ ಗೌಡ ಹಂಚಿಕೊಂಡಿರುವ ಫೋಟೋಗೆ ಹಾಗೂ ಈ ಘಟನೆಗೆ ಸಂಬಂಧಿಸಿದಂತೆ ಹರಿಹಾಯ್ದಿದ್ದಾರೆ. ಪವಿತ್ರಾ ಗೌಡ ಮಾಡಿದ್ದು ಸರಿಯಲ್ಲ, ಒಂದು ಸಂಸಾರವನ್ನು ಹಾಳು ಮಾಡಬಾರದು. ದುಡ್ಡಿಗಾಗಿ ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದು. ತಾಳಿ ಕಟ್ಟಿದ ಗಂಡನಿಗೆ ಹುಟ್ಟಿದ ಮಗಳನ್ನು ಬೇರೊಬ್ಬ ಮಹಿಳೆಯ ಗಂಡನ ಮಗು ಹೇಳುವುದು ಎಂಥಾ ನೀಚ ಸಂಸ್ಕೃತಿ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮೂಲಕ ಪವಿತ್ರಾ ಗೌಡ ವಿರುದ್ಧ ಕಿಡಿಕಾರಿದ್ದಾರೆ.
ಕೆಲವು ದಿನಗಳ ಹಿಂದೆ ನಟ ದರ್ಶನ್ ಪವಿತ್ರಾ ಗೌಡ ಮಗಳು ಖುಷಿ ಗೌಡ ಬರ್ತಡೇ ಆಚರಣೆಯಲ್ಲಿ ಭಾಗವಹಿಸಿ, ಆಕೆಯೊಂದಿಗೆ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಆದರೆ, ಇದು ಹೆಚ್ಚು ಸುದ್ದಿಯಾಗಲಿಲ್ಲ. ವಿಡಿಯೋ ಮಾತ್ರ ಎಲ್ಲಡೆ ಹರಿದಾಡಿತು.ಇತ್ತ ಕಳೆದ ಫೆಬ್ರವರಿಯಲ್ಲಿ ಪವಿತ್ರಾ ಗೌಡ ಅವರು ದರ್ಶನ್ ಹುಟ್ಟುಹಬ್ಬ ಆಚರಣೆ ಮಾಡಿದ ವಿಡಿಯೋವನ್ನು ನಟಿ ಮೇಘ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದಾಗಲೂ ವಿಜಯಲಕ್ಷ್ಮೀ ಧ್ವನಿ ಏರಿಸಿದ್ದರು. ಇದರಿಂದ ಹೆದರಿದ ಮೇಘ ಶೆಟ್ಟಿ ತಕ್ಷಣ ವಿಡಿಯೋ ಡಿಲೀಟ್ ಮಾಡಿದ್ದರು.ಇನ್ನು ದರ್ಶನ್ ಮತ್ತು ಪವಿತ್ರಾ ಗೌಡ ವಿಚಾರ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಆದರೆ, ಈ ಬಾರಿ ವಿಜಯಲಕ್ಷ್ಮೀ ಅವರೆ ಕಾನೂನು ಹೋರಾಟ ಮಾಡುವುದಾಗಿ ಕರೆ ನೀಡಿದ್ದು, ಮುಂದೆ ಈ ಪ್ರಕರಣ ಯಾವ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.