ನ್ಯೂಸ್ ನಾಟೌಟ್ : ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸಾಗುವ ಕಾಲಕ್ಕೆ ದಿನಗಣನೆ ಶುರುವಾಗಿದೆ.ಜ.22 ಕೋಟ್ಯಂತರ ರಾಮ ಭಕ್ತರು ಬಹುದಿನಗಳಿಂದ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಡಲಿದೆ.ಇದಕ್ಕಾಗಿ ಹಲವಾರು ಮಂದಿ ಶ್ರಮಪಟ್ರೆ ಇನ್ನೂ ಕೆಲವರು ಹರಕೆಯನ್ನೂ ಹೊತ್ತಿದ್ದಾರೆ.ಇದೀಗ ಇವೆಲ್ಲದಕ್ಕೂ ವಿಭಿನ್ನವೆಂಬಂತೆ ಇಲ್ಲೊಬ್ಬ ಮಹಿಳೆ ರಾಮಮಂದಿರದ ನಿರ್ಮಾಣಕ್ಕೆ ಸಂಕಲ್ಪ ತೊಟ್ಟು 16 ಲಕ್ಷಕ್ಕೂ ಅಧಿಕ ಶ್ರೀರಾಮ ನಾಮ ಜಪಗಳನ್ನ ಬರೆದು ಭಾರಿ ವೈರಲಾಗಿದ್ದಾರೆ.ಕಳೆದ ೩೫ ವರ್ಷಗಳಿಂದಲೂ ರಾಮಮಂದಿರದ ಉದ್ಘಾಟನೆಗೆ ಶಬರಿಯಂತೆ ಕಾಯುತ್ತಿದ್ದಾರೆ. ಯಾರಿವರು ಗೊತ್ತಾ?ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
ಕಳೆದ ಹಲವು ವರ್ಷಗಳಿಂದಲೂ ಈ ಮಹಿಳೆ ಭಕ್ತಿಯಿಂದ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.ಮಾತ್ರವಲ್ಲ ಶ್ರೀರಾಮನ ಜಪ ಬರೆಯುತ್ತಿರುವ ಮಹಿಳೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದ ನಿವಾಸಿ ಅನ್ನಪೂರ್ಣ ಯಲ್ಲುಸಾ ನಿರಂಜನ್. ಶ್ರೀಮತಿ ಅನ್ನಪೂರ್ಣ ಯಲ್ಲುಸಾ ನಿರಂಜನ್ ಎಂಬ ಆಧುನಿಕ ಶಬರಿ ತನ್ನ ಇಷ್ಟ ದೇವರಾದ ಶ್ರೀ ರಾಮನ ಜಪಗಳನ್ನು 16 ಲಕ್ಷ 68,368 ಶ್ರೀರಾಮ ಜಪವನ್ನು ಬರೆದು ತನ್ನ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರು ಬರೆದ ರಾಮ ನಾಮ ಜಪಗಳ ಪುಸ್ತಕಗಳನ್ನು ನೋಡಿದ್ರೆ ಒಂದು ಕ್ಷಣ ದಂಗಾಗೋದು ಗ್ಯಾರಂಟಿ.ಇದನ್ನು ಆಯೋಧ್ಯೆಗೆ ಕಳುಹಿಸಬೇಕೆಂಬ ಮಹಾದಾಸೆಯನ್ನೂ ಹೊಂದಿದ್ದಾರೆ. ಹೀಗಾಗಿ ಬಾಗಲಕೋಟೆಯ ಸಂಸದ ಪಿ.ಸಿ.ಗದ್ದಿಗೌಡ ಅವರು ಮಹಿಳೆಯ ಮನೆಗೆ ಆಗಮಿಸಿ ಮಹಿಳೆಯ ಸಾಧನೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಬರೆದಂತ 16 ಲಕ್ಷಕ್ಕೂ ಅಧಿಕ ರಾಮ ನಾಮ ಜಪಗಳುಳ್ಳ ಪುಸ್ತಕಗಳನ್ನು ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಎಂ.ಎಲ್.ಸಿ ಪಿ.ಹೆಚ್.ಪೂಜಾರ್, ಬೆಳಗಾವಿ ವಿಭಾಗದ ಬಿಜೆಪಿ ಸಹಪ್ರಭಾರಿ ಬಸವರಾಜ ಯಂಕಂಚಿ ಸಾಥ್ ನೀಡಿದ್ದಾರೆ.
ಶ್ರೀ ರಾಮನ ಪ್ರತಿಷ್ಠಾಪನೆಗೆ ಹಲವಾರು ಮಂದಿ ತಮ್ಮದೇ ಆದ ಶೈಲಿಯಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ರಾಮಮಂದಿರ ನಿರ್ಮಾಣಕ್ಕೆ ಹೇಗೆ ಪಣತೊಟ್ಟರೋ ಅದೇ ರೀತಿ ದೇಶದಾದ್ಯಂತ ಅನ್ನಪೂರ್ಣ ನಿರಂಜನ್ ಅಂತಹ ಮಹಿಳೆಯರು ಕೂಡ ಎಲೆಯ ಮರೆಯ ಕಾಯಿಯ ರೀತಿಯಲ್ಲಿಯೇ ವಿಶೇಷ ಸೇವೆ ಸಲ್ಲಿಸಿ ಇದೀಗ ಮುನ್ನಲೆಗೆ ಬರುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಜನಪ್ರತಿನಿಧಿಗಳು “ಇಂತಹ ಮಹಿಳೆಯರ ಪ್ರಾಮಾಣಿಕ ಪ್ರಯತ್ನ ಹಾಗೂ ಭಕ್ತಿ ಶ್ರದ್ಧೆಗೆ ಇಂದು ನಾವು ರಾಮಮಂದಿರವನ್ನು ಕಾಣುವ ಭಾಗ್ಯ ದೊರೆತಂತಾಗಿದೆ ಎಂದಿದ್ದಾರೆ.ಈ ಮಹಿಳೆಯ ಸಾಧನೆಗಳನ್ನು ಹಾಗೂ ಅವರು ಬರೆದ ರಾಮನಾಮ ಜಪಗಳನ್ನು ಅಯೋಧ್ಯೆಗೆ ತಲುಪಿಸುವುದರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೂ ತರುತ್ತೇನೆ” ಎಂದಿದ್ದಾರೆ.