ನ್ಯೂಸ್ ನಾಟೌಟ್ :ಭಾರತ ಕೃಷಿ ಪ್ರಧಾನವಾದ ದೇಶ.ಇಲ್ಲಿ ರೈತರಿಗೆ ಮೊದಲ ಆದ್ಯತೆ.ಇದಕ್ಕಾಗಿಯೇ ರೈತ ದೇಶದ ಬೆನ್ನೆಲುಬು ಎಂದು ಕರೆಯೋದು.ನಾವು ತಿನ್ನುವ ಆಹಾರವಾಗಿರಬಹುದು. ದವಸ ಧಾನ್ಯಗಳಾಗಿರಬಹುದು.ಹಣ್ಣು, ತರಕಾರಿ, ಹೈನುಗಾರಿಕಾ ಉತ್ಪನ್ನಗಳನ್ನೆಲ್ಲ ಉತ್ಪಾದನೆಯಾಗೋದೇ ಈ ರೈತರಿಂದಲೇ.ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು ಈ ರೈತರೇ ಎಂಬುದು ಹೆಮ್ಮೆ ಪಡುವ ವಿಚಾರ. ಈ ಮಾತನ್ನು ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ನಮ್ಮ ದೇಶ ಪ್ರತಿ ವರ್ಷ ಜನವರಿ ೨೬ನೇ ದಿನವನ್ನು ಗಣರಾಜೋತ್ಸವ ದಿನ ಅಂತ ಆಚರಣೆ ಮಾಡುತ್ತೆ.ಇದೀಗ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತ ದಂಪತಿಗಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಈ ಬಾರಿ 1,500 ರೈತ ದಂಪತಿಗಳನ್ನು ದೇಶದ ವಿವಿಧ ಭಾಗಗಳಿಂದ ಆರಿಸಿ ಆಹ್ವಾನ ನೀಡಲಾಗಿದೆ ಅನ್ನೋದು ಭಾರಿ ವಿಶೇಷ ಸಂಗತಿಯೆನಿಸಿಕೊಂಡಿದೆ.
ಅಂದಹಾಗೆ ಇದರಲ್ಲಿ ವಿವಿಧ ರೈತ ಉತ್ಪಾದಕರ ಸಂಘದ ಪ್ರತಿನಿಧಿಗಳು ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು ಮತ್ತು ಸರ್ಕಾರದ ವಿವಿಧ ಸಣ್ಣ ನೀರಾವರಿ ಯೋಜನೆಯ ಫಲಾನುಭವಿಗಳನ್ನು ಕೂಡ ಆಯ್ಕೆ ಮಾಡಲಾಗಿದೆ ಅನ್ನೋದು ವಿಶೇಷ.ಇವರಿಗೆ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಕಾರ್ಯಕ್ರಮದ ನಂತರ ಭೋಜನಕೂಟವನ್ನೂ ಏರ್ಪಡಿಸಿದ್ದಾರೆ. ಕಳೆದ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೂ 500 ರೈತರನ್ನು ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಲಾಗಿತ್ತು.
ರೈತರು ಎಂದಿಗೂ ಶ್ರಮ ಜೀವಿಗಳು.ಅವರನ್ನು ಗೌರವಿಸೋದು ನಮ್ಮೆಲ್ಲರ ಕರ್ತವ್ಯವೂ ಹೌದು.ರೈತರು ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಹೇಗೆ ಬೆಳೆ ಬೆಳೆಸುತ್ತಾರೆ, ಅವರ ಬದುಕು ಹೇಗಿದೆ, ಅವರು ಹೇಗೆ ಜೀವನ ನಿರ್ವಹಣೆ ಮಾಡುತ್ತಾರೆ ಎಂಬುದರ ಬಗ್ಗೆ ಶ್ರೀಸಾಮಾನ್ಯನಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ರೈತರಿಗೆ ಈ ವಿಶೇಷ ಗೌರವ ನೀಡುವ ಪ್ರಯತ್ನಗಳಾಗುತ್ತಿವೆ. ಈ ಮೂಲಕ ಹೆಚ್ಚು ವಿದ್ಯಾಭ್ಯಾಸವನ್ನು ಪಡೆಯದ ಅವರ ಸಾಮಾನ್ಯ ಬದುಕನ್ನು ಬೆಳಗಿಸುವ ಈ ಒಂದು ಪ್ರಯತ್ನವನ್ನು ನಾವೆಲ್ಲ ಶ್ಲಾಘಿಸಲೇಬೇಕು.ಮಣ್ಣಿನ ಮಕ್ಕಳ ಬದುಕು ಇನ್ನಷ್ಟು ಸುಂದರವಾಗಿರಲಿ.ಅವರು ಕಷ್ಟ,ನಿಂದನೆಗಳನ್ನು ಮೆಟ್ಟಿ ಮುನ್ನಡೆಯಲಿ ಅನ್ನೋದೇ ನಮ್ಮ ಕಳಕಳಿ..