ನ್ಯೂಸ್ ನಾಟೌಟ್ : ಮಕ್ಕಳು ದೇವರಿಗೆ ಸಮಾನ.ಅವರ ಮನಸ್ಸು ಮುಗ್ಧವಾಗಿರುತ್ತೆ.ಅವರ ಬಳಿ ಯಾರು ಪ್ರೀತಿ ತೋರಿಸುತ್ತಾರೋ ಅಂಥವರ ಮೇಲೆ ಮಕ್ಕಳು ಕೂಡ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ.ಸಾಮಾನ್ಯವಾಗಿ ಮಕ್ಕಳು ಅವರ ತಾಯಿ , ತಂದೆಗೆ ಗಿಫ್ಟ್ ಕೊಡೋದು ಸಾಮಾನ್ಯ.ಆದರೆ ಇಲ್ಲೊಬ್ಬ ಬಾಲಕ ತಾನು ಕೂಡಿಟ್ಟ ಹಣದಿಂದಲೇ ತನ್ನ ಮನೆಗೆಲಸದಾಕೆಗೆ ಮೊಬೈಲ್ ಫೋನನ್ನು ಗಿಫ್ಟ್ ಕೊಟ್ಟು ಸುದ್ದಿಯಾಗಿದ್ದಾನೆ..!
ಮುಗ್ಧ ಹಾಗೂ ಮಾನವೀಯ ಗುಣದಿಂದ ಈ ಬಾಲಕ ಸದ್ಯ ಇಂಟರ್ ನೆಟ್ ನಲ್ಲಿ ಬಾರಿ ವೈರಲ್ ಆಗಿದ್ದಾನೆ.ಮದ್ರಾಸ್ ಮೂಲದ ವಿ.ಬಾಲಜಿ ಅವರ ಮಗ ಅಂಕಿತ್ ತನ್ನ ಮಾನವೀಯ ಗುಣದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಾಲಕ.ತನ್ನ ಮನೆಯ ಅಡುಗೆ ಕೆಲಸಕ್ಕೆ ಬರುವ ಮಹಿಳೆಗೆ ತಾನು ಕೂಡಿಟ್ಟ ಹಣದಿಂದ ಮೊಬೈಲ್ ಫೋನ್ ಉಡುಗೊರೆಯಾಗಿ ಕೊಟ್ಟಿದ್ದಾನೆ.ಸದ್ಯ ಈ ಫೋಟೋ ಸಾವಿರ ಪದಗಳನ್ನು ಹೇಳುತ್ತೆ.ಈಗಿನ ಬ್ಯುಸಿ ಲೈಫ್ ನಲ್ಲಿ ತಂದೆ-ತಾಯಿ ಇಬ್ಬರೂ ಆಫೀಸ್ ಕೆಲಸಕ್ಕೆ ಹೋಗಿರುವಾಗ ಮನೆಯಲ್ಲಿ ಮಕ್ಕಳಿಗೆ ಮನೆಗೆಲಸದವರೇ ಆಧಾರವಾಗಿರುತ್ತಾರೆ.ಮಕ್ಕಳ ಆರೈಕೆಯನ್ನು ಅವರೇ ಮಾಡುವಾಗ ಕ್ರಮೇಣ ಆ ಮಕ್ಕಳಿಗೆ ಅವರೇ ತಾಯಿಯ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.ಬಹುಶಃ ಇದೇ ಕಾರಣದಿಂದಲೋ ಏನೋ ಈ ಮಗು ಕೂಡ ಮನೆಗೆಲಸದಾಕೆಯನ್ನು ಹಚ್ಚಿಕೊಂಡಿರಬಹುದು.ಮನೆಗೆಲಸದಾಕೆಯೂ ಕೂಡ ಇದು ತನ್ನ ಮಗುವಿನಂತೆಯೇ ಎಂದು ಮುದ್ದಾಡಿರಬಹುದು ಎಂದು ಅಭಿಪ್ರಾಯಗಳು ಕೇಳಿ ಬಂದಿದೆ.
ಈ ಬಗ್ಗೆ ಅಂಕಿತ್ ತಂದೆ ವಿ.ಬಾಲಜಿ ಅವರು ಟ್ವಿಟರ್(ಎಕ್ಸ್) ನಲ್ಲಿ ಫೋಟೋ ಹಂಚಿಕೊಂಡು, ಬರೆದುಕೊಂಡಿದ್ದಾರೆ. “ಅಂಕಿತ್ ವಾರಾಂತ್ಯದಲ್ಲಿ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗಳನ್ನು ಆಡಿ ಅದರಿಂದ ಬಂದ ಹಣವನ್ನು ಕೂಡಿಟ್ಟಿದ್ದಾನೆ. ಇವತ್ತು ನಮ್ಮ ಮನೆಯ ಅಡುಗೆ ಕೆಲಸದಾಕೆ ಸರೋಜಾಳಿಗೆ 2000 ಬೆಲೆಯ ಮೊಬೈಲ್ ಫೋನ್ ನ್ನು ತನ್ನ ಹಣದಿಂದಲೇ ತಂದು ಉಡುಗೊರೆಯಾಗಿ ನೀಡಿದ್ದಾನೆ. ಸರೋಜಾ ಅಂಕಿತ್ 6 ತಿಂಗಳು ಇರುವಾಗಿನಿಂದ ಆತನನ್ನು ಆರೈಕೆ ಮಾಡುತ್ತಿದ್ದಳು” ಎಂದು ಬಾಲಜಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “”ಅದ್ಭುತ… ನೀವು ಪೋಷಕರಾಗಿ ದೊಡ್ಡ ಮೆಚ್ಚುಗೆಗೆ ಅರ್ಹರು..” ಎಂದು ಒಬ್ಬರು ಬರೆದುಕೊಂಡಿದ್ದಾರೆ.“ನನ್ನ ಪೋಷಕರು ಕೊಡುವುದರ ಬಗ್ಗೆ ನನಗೆ ಹೆಚ್ಚಿನದನ್ನು ಕಲಿಸಿದ್ದಾರೆ. ಈ ಟ್ವೀಟ್ ನನಗೆ ಕೃತಜ್ಞತೆ ಮತ್ತು ಸಂತೋಷವನ್ನು ತುಂಬಿದೆ. ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.