ನ್ಯೂಸ್ ನಾಟೌಟ್: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಕಿಡಿ ಕಾರಿರುವ ಬಿಜೆಪಿ ಫೈರ್ ಬ್ರಾಂಡ್ ಸ್ವಪಕ್ಷೀಯರ ಬಗ್ಗೆಯೇ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಹಿರಿಯ ನಾಯಕರಿಗೆ ವಿಜಯೇಂದ್ರ ಕಾಟ ಕೊಟ್ಟಿದ್ದಾರೆ ಮತ್ತು ಸೋಲಿಸಲು ಹಣ ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಬೊಮ್ಮಾಯಿ ಮಾತ್ರವಲ್ಲದೆ ಹಲವು ಹಿರಿಯ ನಾಯಕರನ್ನು ಸೋಲಿಸಲು ವಿಜಯೇಂದ್ರ ಹುನ್ನಾರ ನಡೆಸಿದ್ದರು. ಅವರಿಂದ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ಶಾಸಕಾಂಗ ಸಭೆ ಬಗ್ಗೆ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಉತ್ತರ ಕರ್ನಾಟಕ ಭಾಗದವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನ ಸಿಗುವವರೆಗೂ ನಾನು ಯಾವುದೇ ಸಭೆಗೆ ಹೋಗಲ್ಲ ಎಂದು ಯತ್ನಾಳ್ ಮತ್ತೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 13ರಂದು ನಡೆಯುವ ಹೋರಾಟದಲ್ಲಿ ನಾನು ಭಾಗವಹಿಸುತ್ತೇನೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಪಂಚಮಸಾಲಿ ಸಮಾಜ ಸೇರಿ ಎಲ್ಲ ಸಮಾಜಕ್ಕೆ ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಅದನ್ನು ಜಾರಿ ಮಾಡಬೇಕಷ್ಟೇ ಎಂದರು.
ಹಿಂದೆಯೂ ನಮ್ಮ ಹೋರಾಟಕ್ಕೆ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ವಿರೋಧ ಮಾಡಿದ್ದರು. ಹೀಗಾಗಿ, ಮೀಸಲಾತಿ ವಿರೋಧಿಸಿದ ವಿಜಯೇಂದ್ರ, ಬಿಎಸ್ ಯಡಿಯೂರಪ್ಪರನ್ನು ನಮ್ಮ ಸಮಾಜ ಒಪ್ಪಲ್ಲ ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ.