ನ್ಯೂಸ್ ನಾಟೌಟ್ :ನಿಜಕ್ಕೂ ಇದೊಂದು ಆಘಾತಕಾರಿ ಸುದ್ದಿ.ಹೃದಯಾಘಾತ…ಈ ಪದವನ್ನು 10 ವರ್ಷಗಳ ಹಿಂದೆ ಅಲ್ಲೋ ಇಲ್ಲೋ ಕೇಳುತ್ತಿದ್ದೆವು.ಆದರೆ ಈಗ ಎಲ್ಲಾ ಕಡೆಯಿಂದಲೂ ಈ ಸುದ್ದಿಯನ್ನು ಕೇಳುತ್ತಿದ್ದೇವೆ.ಬಹಳ ಬೇಸರದ ಸಂಗತಿಯೆಂದರೆ ಇನ್ನು ಬಾಳಿ ಬದುಕಬೇಕಾಗಿದ್ದ,ಸಣ್ಣ ಮಕ್ಕಳೇ ಈ ಹೃದಯಘಾತಕ್ಕೆ ದುರಂತ ಅಂತ್ಯವನ್ನೇ ಕಾಣುತ್ತಿದ್ದಾರೆ.
ಹೌದು,ನಿನ್ನೆಯಷ್ಟೇ(ಡಿ.20) ಚಿಕ್ಕಮಗಳೂರಿನಲ್ಲಿ ೭ನೇ ತರಗತಿ ವಿದ್ಯಾರ್ಥಿನಿಯೋರ್ವಳು ಹೃದಯಘಾತಕ್ಕೆ ಒಳಗಾಗಿ ಉಸಿರು ಚೆಲ್ಲಿದ್ದಳು.ಇದೀಗ ಉಡುಪಿಯ ಕಾಲೇಜೊಂದರಲ್ಲಿ ಓದುತ್ತಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದಾನೆ. ಅಫ್ಕಾರ್ (17) ದುರಂತ ಅಂತ್ಯ ಕಂಡ ಬಾಲಕ.
ಈತ ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿದ್ದ.ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಸೇಶನ್ ಆಫ್ ಇಂಡಿಯಾದ ಸಕ್ರಿಯ ಸದಸ್ಯನಾಗಿದ್ದ.ಅಫ್ಕಾರ್ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ.ಡಿಸೆಂಬರ್ 6ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ.ಕಳೆದ 18ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದ ಅಫ್ಕಾರ್ಗೆ ಊರಿಗೆ ಹಿಂದಿರುಗಿದ ಸಂದರ್ಭ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ಸಾಗಿಸುವ ವೇಳೆ ಹೃದಯಾಘಾತವಾಗಿ ಕೊನೆಯುಸಿರೆಳೆದ.