ನ್ಯೂಸ್ ನಾಟೌಟ್: ಹುಲಿ ದಾಳಿ ನಡೆಸಿ ಕುರಿಗಾಹಿಯನ್ನು ಅರ್ಧ ತಿಂದಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಆಡಿನ ಕಣಿವೆ ಎಂಬಲ್ಲಿ ಮಂಗಳವಾರ(ಡಿ.12) ರಂದು ನಡೆದಿದೆ. ಬಲಿಯಾದಾತನನ್ನು ಆಡಿನ ಕಣಿವೆ ನಿವಾಸಿ ಬಸವ (54) ಎಂದು ಗುರುತಿಸಲಾಗಿದೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.
ಬುಡಕಟ್ಟು ಜನಾಂಗದವರಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದರು. ನಂತರ ಮನೆಗೆ ವಾಪಸಾಗದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.
ಈ ವೇಳೆ ಹುಲಿ ದಾಳಿ ನಡೆಸಿ ಅರ್ಧ ತಿಂದಿರುವ ಬಸವ ಅವರ ದೇಹ ಪತ್ತೆಯಾಗಿದೆ. ಕೂಡಲೇ ಈ ಕುರಿತು ಕುಟುಂಬಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದಕ್ಕೂ ಮುನ್ನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಣಸೂರು ವಲಯದ ಹತ್ತಿರ ರಿಸರ್ವ್ ಫಾರೆಸ್ಟ್ನಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ವ್ಯಕ್ತಿ ಕೂಡ ಹುಲಿ ದಾಳಿಯಿಂದ ಸಾವನ್ನಪ್ಪಿದ್ದ ಎನ್ನಲಾಗಿದೆ.