ನ್ಯೂಸ್ ನಾಟೌಟ್ : ಕಾಮಯಾನಿ ಎಕ್ಸ್ಪ್ರೆಸ್ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಳಿಯಿಂದ ಮಧ್ಯಪ್ರದೇಶದ ಬೈತುಲ್ ಮೂಲದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ.
ಅಚ್ಚರಿಯ ವಿಷಯವೆಂದರೆ ರೈಲಿನಲ್ಲಿದ್ದ ಇತರ ಪ್ರಯಾಣಿಕರಿಗೆ ಈ ಬಗ್ಗೆ ತಿಳಿದಿಲ್ಲ. ರೈಲು ಹತ್ತಿದಾಗಿನಿಂದ ಸಿಂಗಲ್ ಸೀಟಿನಲ್ಲಿ ಕಿವಿಗೆ ಇಯರ್ ಫೋನ್ ಹಾಕಿ ಕುಳಿತಿದ್ದರಿಂದ ಆತ ಮಲಗಿರುವುದಾಗಿ ಇತರ ಪ್ರಯಾಣಿಕರು ತಿಳಿದುಕೊಂಡಿದ್ದಾರೆ ಎನ್ನಲಾಗಿದೆ.
ರೈಲು ಸುಮಾರು 303 ಕಿಲೋಮೀಟರ್ ದೂರವನ್ನು ಕ್ರಮಿಸಿದ ನಂತರ ಯುವಕ ಇನ್ನೂ ಕೂಡ ದೇಹದಲ್ಲಿ ಯಾವುದೇ ಚಲನೆಯಿಲ್ಲದೆ ಮಲಗಿರುವುದರಿಂದ ಅದೇ ಕಂಪಾರ್ಟ್ ಮೆಂಟ್ ನಲ್ಲಿರುವ ಪ್ರಯಾಣಿಕರಿಗೆ ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗಿದೆ.
ಅನುಮಾನಗೊಂಡು ಪರಿಶೀಲಿಸಿದಾಗ ಆತ ಕೊನೆಯುಸಿರೆಳೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ರೈಲ್ವೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿ ನಂತರ ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ದಾಮೋಹ್ ನಿಲ್ದಾಣದಲ್ಲಿ ಯುವಕನ ದೇಹವನ್ನು ರೈಲಿನಿಂದ ಹೊರತೆಗೆದು ಆಸ್ಪತ್ರೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವೇಳೆ ಕೆಲ ಘಂಟೆಗಳ ಮೊದಲೇ ಚಳಿಯಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಇದಾದ ನಂತರ ಯುವಕನ ಬಳಿ ಇದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಾವಿನ ಬಗ್ಗೆ ಆತನ ಮನೆಯವರಿಗೆ ಮಾಹಿತಿ ನೀಡಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.