ನ್ಯೂಸ್ ನಾಟೌಟ್ :ಹಿಜಾಬ್ ಕುರಿತ ಸಿಎಂ ಸಿದ್ದು ಹೇಳಿಕೆಗೆ ಬಿಜೆಪಿಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.ಇದರ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆದ್ರಾ ಎಂಬ ಪ್ರಶ್ನೆ ಕಾಡಲು ಶುರುವಾಗಿದೆ.ಏಕೆಂದರೆ ಈ ಸಂಬಂಧ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹಿಜಾಬ್ ನಿಷೇಧ (Hijab Ban Withdraw) ಆದೇಶಕ್ಕೆ ಇನ್ನೂ ತೀರ್ಮಾನಿಸಿಲ್ಲ ಎಂಬ ಉತ್ತರ ನೀಡಿದ್ದಾರೆ.
ಹಾಗಾದ್ರೆ ನಿನ್ನೆ ನೀಡಿದ ಹೇಳಿಕೆಗೆ ಭಾರೀ ವಿವಾದದ ಬಳಿಕ ಸಿಎಂ ಎಚ್ಚೆತ್ತುಕೊಂಡು ಇಂದು ಹೇಳಿಕೆ ಬದಲಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ. ಯಾರೋ ಪ್ರಶ್ನೆ ಕೇಳಿದ್ರು. ಆಗ ಆದೇಶ ವಾಪಸ್ಸಿಗೆ ಯೋಚನೆ ಮಾಡ್ತಿದ್ದೀವಿ ಅಂತಷ್ಟೇ ಹೇಳಿದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನಿಸ್ತೀವಿ ಎಂದು ಇಂದು ಹೇಳಿಕೆ ಕೊಟ್ಟಿದ್ದು,ಈ ಹೇಳಿಕೆ ಗೊಂದಲವನ್ನುಂಟು ಮಾಡಿದೆ.
ನಿನ್ನೆ(ಡಿ.೨೨ರಂದು) ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿತ್ತು. ಅದನ್ನು ವಾಪಸ್ ಪಡೆಯಲಾಗುವುದು. ಹಿಜಾಬ್ ನಿಷೇಧ ವಾಪಸ್ಗೆ ತಿಳಿಸಿದ್ದೇನೆ ಎಂದು ಹೇಳಿದ್ದರು.ಉಡುಪು ಅವರವರ ಇಷ್ಟ. ಹಿಜಾಬ್ ನಿಷೇಧ ವಾಪಸ್ಗೆ ಹೇಳಿದ್ದೀನಿ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಅಂತಹ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಹಿಜಾಬ್ ನಿಷೇಧದ ಆದೇಶ ವಾಪಸ್ ಪಡೆಯುತ್ತೇವೆ. ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ, ಪರೀಕ್ಷೆ ಬರೆಯಲು ಹೋಗಬಹುದು ಎಂದು ಹೇಳಿದ್ದರು.