ನ್ಯೂಸ್ ನಾಟೌಟ್ : ಕಿಡ್ನಿಯಲ್ಲಿ ಒಂದೆರೆಡು ಕಲ್ಲುಗಳು ಇರುವುದನ್ನು ನೋಡಿದ್ದೇವೆ.ಆ ಕಲ್ಲುಗಳು ಹೊಟ್ಟೆಯೊಳಗಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.ಆದರೆ, ತೈವಾನ್ ಮೂಲದ ಮಹಿಳೆಯೊಬ್ಬಳ ಕಿಡ್ನಿಯಿಂದ ಬರೋಬ್ಬರಿ 300 ಕಲ್ಲುಗಳನ್ನು ಆಪರೇಷನ್ ಮೂಲಕ ಹೊರತೆಗೆಯಲಾಗಿದೆ.ಈ ಘಟನೆಗೆ ಸ್ವತಃ ವೈದ್ಯರೇ ಅಚ್ಚರಿಗೆ ಒಳಗಾಗಿದ್ದಾರೆ. ಅದರಲ್ಲೂ ಅಷ್ಟೊಂದು ಕಿಡ್ನಿ ಸ್ಟೋನ್ಸ್ಗೆ ಕಾರಣ ಏನು ಅಂತಾ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
ಇತ್ತೀಚೆಗೆ ಮಹಿಳೆಗೆ ಬೆನ್ನಿನ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಮಾತ್ರವಲ್ಲ ಜ್ವರದಿಂದಲೂ ಬಳಲುತ್ತಿದ್ದ ಕ್ಸಿಯಾವೋ ಯು ಹೆಸರಿನ ಮಹಿಳೆ ಕೆಲ ದಿನಗಳ ಹಿಂದಷ್ಟೇ ತೈವಾನ್ನ ಚಿ ಮೆಯಿ ವೈದ್ಯಕೀಯ ಕೇಂದ್ರಕ್ಕೆ ದಾಖಲಾಗಿದ್ದಳು. ಈ ಬಗ್ಗೆ ಆಸ್ಪತ್ರೆಯ ವೆಬ್ಸೈಟ್ನಲ್ಲಿ ಡಿ.8ರಂದು ಲೇಖನ ಪ್ರಕಟವಾಗಿದೆ. ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದ ತುರ್ತು ವಿಭಾಗದ ವೈದ್ಯರು, ಆಕೆಯ ಕಿಡ್ನಿಯು ಹೆಚ್ಚು ಅಪಾಯದಲ್ಲಿರುವುದನ್ನು ಗಮನಿಸಿದರು. ಕಿಡ್ನಿಯು ದ್ರವದಿಂದ ತುಂಬಿ ಊದಿಕೊಂಡಿತ್ತು ಮತ್ತು ಅದರೊಳಗೆ ಕಲ್ಲುಗಳಿದ್ದವು ಎಂದು ಲೇಖನದಲ್ಲಿ ಉಲ್ಲೇಖವಾಗಿದೆ.
ಈ ವೇಳೆ ತಪಾಸಣೆ ಶುರು ಮಾಡಿದ ವೈದ್ಯರಿಗೆ ಕಲ್ಲುಗಳು ಸುಮಾರು 5 ಮಿಲಿ ಮೀಟರ್ನಿಂದ 2 ಸೆ.ಮೀ ಗಾತ್ರದಲ್ಲಿವೆ ಎಂಬುದು ಸಿಟಿ ಸ್ಕ್ಯಾನ್ನಿಂದ ತಿಳಿಯಿತು. ಬಳಿಕ ರಕ್ತ ಪರೀಕ್ಷೆ ಮಾಡಿದಾಗ ಬಿಳಿ ರಕ್ತಕಣಗಳು ಹೆಚ್ಚಾಗಿರುವುದು ಗೊತ್ತಾಯಿತು. ಬಳಿಕ ವೈದ್ಯರು ಆಕೆಗೆ ಆ್ಯಂಟಿ ಬಯಾಟಿಕ್ ನೀಡಿ, ಕಿಡ್ನಿಯಲ್ಲಿದ್ದ ದ್ರವವನ್ನು ಹೊರಗೆ ತೆಗೆದರು. ಮಿನಿಮಲಿ ಇನ್ವೆಸಿವ್ ಸರ್ಜರಿ ಮಾಡಿ 300ಕ್ಕೂ ಅಧಿಕ ಕಲ್ಲುಗಳನ್ನು ಹೊರ ತೆಗೆದರು. ಆಪರೇಷನ್ ಬಳಿಕ ರೋಗಿಯ ಆರೋಗ್ಯ ಸ್ಥಿರವಾಗಿದೆ. ಕೆಲವು ದಿನಗಳವರೆಗೆ ತಪಾಸಣೆ ನಡೆಸಿ ಡಿಸ್ಚಾರ್ಜ್ ಮಾಡಲಾಗಿದೆ.
ಆಪರೇಷನ್ಗೆ ಒಳಗಾದ ಕ್ಸಿಯಾವೋ ಯು ಹೆಚ್ಚು ನೀರು ಕುಡಿಯುವುದಿಲ್ಲ ಅದರ ಬದಲಾಗಿ ತೈವಾನ್ನ ಪ್ರಸಿದ್ಧ ಬಬಲ್ ಟೀ ಅನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದಲೇ ಆಕೆಗೆ ಕಿಡ್ನಿ ಕಲ್ಲು ಉಂಟಾಗಿದೆ. ಹೆಚ್ಚಾಗಿ ಟೀ ಸೇವನೆ ಮಾಡುವುದು ಕೂಡ ಉತ್ತಮವಲ್ಲ ಎಂದು ವೈದ್ಯರು ತಿಳಿಸಿದ್ದಾರೆ.