ನ್ಯೂಸ್ ನಾಟೌಟ್: ಸುಳ್ಯ ಅಂದ್ರೆ ಮೊದಲು ನೆನಪಾಗೋದು ದಿವಂಗತ ಕುರುಂಜಿ ವೆಂಕಟರಮಣ ಗೌಡರು. ಇಂದು ಸುಳ್ಯ ಇಷ್ಟೊಂದು ದೊಡ್ಡ ಮಟ್ಟಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡಿದೆ ಎಂದರೆ ಅದಕ್ಕೆಲ್ಲ ಕಾರಣ ಶ್ರೀ ಕುರುಂಜಿಯವರು. ಸುಳ್ಯದಂತಹ ಸಣ್ಣ ನಗರದಲ್ಲಿ ತಲೆಎತ್ತಿರುವ ಹಲವಾರು ಶಿಕ್ಷಣ ಸಂಸ್ಥೆಗಳ ಹಿಂದಿರೋದು ಒಬ್ಬ ಮಹಾನ್ ಚೇತನ. ಆ ಚೇತನ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಆಶೋತ್ತರ, ಮಾರ್ಗದರ್ಶನದ ಮೌಲ್ಯಗಳು ಇಂದಿಗೂ ಜೀವಂತವಾಗಿದೆ.
ಸದ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯದ ಆಡಳಿತ ವರ್ಗವನ್ನು ಕುರುಂಜಿ ವೆಂಕಟರಮಣ ಗೌಡರ ಹಿರಿಯ ಪುತ್ರ ಡಾ. ಕೆ.ವಿ ಚಿದಾನಂದರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ಡಾ ರೇಣುಕಾ ಪ್ರಸಾದ್ ಅವರ ಆಡಳಿತದಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಕಸಿದುಕೊಳ್ಳುವುದಕ್ಕೆ ಡಾ. ಕೆ.ವಿ ಚಿದಾನಂದ ಅವರ ಆಡಳಿತ ವರ್ಗ ಪ್ರಯತ್ನಿಸಿದೆ ಅನ್ನುವ ವಿಚಾರ ಕಳೆದ ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಮಾತ್ರವಲ್ಲ ಪೊಲೀಸ್ ಠಾಣೆ ಮೆಟ್ಟಿಲವರೆಗೆ ತಲುಪಿತ್ತು. ಇದೆಲ್ಲ ಬೆಳವಣಿಗೆಗಳ ನಡುವೆ ಇದೀಗ ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಭರತ್ ಮುಂಡೋಡಿಯವರ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚಿಸಲಾಗಿದೆ.
ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಎನ್ ಎ ರಾಮಚಂದ್ರ, ಕಾರ್ಯಾಧ್ಯಕ್ಷರಾಗಿ ಜಾಕೆ ಮಾಧವ ಗೌಡ, ಉಪಾಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಎಸ್ .ಎನ್ ಮನ್ಮಥ, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಮಡಪ್ಪಾಡಿ, ಕಾರ್ಯದರ್ಶಿಯಾಗಿ ಗಂಗಾಧರ್, ಕೋಶಾಧಿಕಾರಿಯಾಗಿ ಸಂಶುದ್ದೀನ್, ಸಂಚಾಲಕರಾಗಿ ಪಿ.ಸಿ.ಜಯರಾಮ್, ವೆಂಕಟ್ ದಂಬೆಕೋಡಿ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ ಇದ್ದಾರೆ. ಸದ್ಯ ಈ ಸಮಿತಿ ಕೆವಿಜಿ ವಿದ್ಯಾಸಂಸ್ಥೆಗಳಲ್ಲಿ ಆಗಿರುವ ಎಲ್ಲ ಗೊಂದಲಗಳನ್ನು ನಿವಾರಣೆ ಮಾಡುವಂತೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರು ಮತ್ತು ಆಡಳಿ ಮಂಡಳಿಯವರಿಗೆ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿ ಒತ್ತಾಯವೇನು..?
- ಕುರುಂಜಿಯವರು ಸ್ಥಾಪಿಸಿದ ವಿದ್ಯಾ ಸಂಸ್ಥೆಗಳು ಅಣ್ಣ ತಮ್ಮಂದಿರ ದ್ವೇಷಕ್ಕೆ ಬಲಿ ಆಗಬಾರದು.
- ಸಾವಿರಾರು ನೌಕರರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು
- ಪ್ರತೀಕಾರದ ಕ್ರಮವನ್ನು ಬಿಡಿ, ಒಪ್ಪದದಂತೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿ
- ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ಹೋರಾಟದ ದಾರಿ ಹಿಡಿಯುತ್ತೇವೆ.