ನ್ಯೂಸ್ ನಾಟೌಟ್ : ಕಡಬ ತಾಲೂಕಿನ ಸುಪ್ರಸಿದ್ಧ ದೇಗುಲವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ವಿಶೇಷ ಆಚರಣೆಗಳಿಂದ ಗಮನ ಸೆಳೆಯಿತು. ಡಿ. 16ರ ಶನಿವಾರದಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
ಗೋವುಗಳು ಸೇವಿಸಿದ ನೈವೇದ್ಯದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಚೌತಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು.
ಸುಮಾರು 95 ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು. ಈ ಉಳುರು ಸೇವೆಯಿಂದ ಚರ್ಮ ರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಜೊತೆಗೆ ಆಯಾಯ ಸಂದರ್ಭಗಳಲ್ಲಿ ಹೇಳಿಕೊಂಡ ಹರಕೆಯ ಪ್ರಕಾರ ಈ ಸೇವೆ ನೆರವೇರಿಸಲಾಗುತ್ತದೆ.
ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ 432 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ನಿಂತಿದ್ದ ಎಲ್ಲಾ ವಯೋಮಾನದ ಭಕ್ತರು ಉರುಳು ಸೇವೆ ಮಾಡಿದ್ದಾರೆ.
ಗೋವು ತಿಂದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತಾ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ಪ್ರಸಾದ ಮತ್ತು ಪ್ರಸಾದ ಭೋಜನವನ್ನು ಸ್ವೀಕರಿಸಿದರು.
ಇಂದು ಶ್ರೀ ಕ್ಷೇತ್ರದಲ್ಲಿ ಅಂದರೆ ಡಿ.17 ರಂದು ಚಂಪಾಷಷ್ಠಿ ಪಂಚಮಿ ದಿನದಂದು ರಾತ್ರಿ ಪಂಚಮಿ ರಥೋತ್ಸವ ಜರುಗಲಿದೆ. ಶ್ರೀದೇವರಿಗೆ ಮಹಾಪೂಜೆ, ಉತ್ಸವ, ತೈಲಾಭ್ಯಂಜನ ಜರುಗಲಿದೆ. ನಾಳೆ (ಡಿ.18) ರಂದು ಪ್ರಾತಃಕಾಲದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ಜರುಗಲಿದೆ ಎಂದು ವರದಿ ತಿಳಿಸಿದೆ.