ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ ಸಂಭ್ರಮದ ಕ್ಷಣಕ್ಕಾಗಿ ದೇಶಕ್ಕೆ ದೇಶವೇ ಕಾತರ ದಿಂದ ಕಾಯುತ್ತಿದೆ. ಇತ್ತ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡು ಪೂಜಿಸುವ ಬಾಲ ರಾಮಲಲ್ಲಾನ ವಿಗ್ರಹವನ್ನು ಇಬ್ಬರು ಕನ್ನಡಿಗರು ಸೇರಿ ಮೂವರು ಶಿಲ್ಪಿಗಳು ರಚಿಸುತ್ತಿದ್ದಾರೆ. ಮೂವರು ಶಿಲ್ಪಿಗಳಲ್ಲಿ ಇಬ್ಬರು ಕನ್ನಡಿಗರೇ ಆಗಿದ್ದು,ಒಬ್ಬರು ಕರಾವಳಿಯವರೆನ್ನುವುದು ವಿಶೇಷವಾಗಿದೆ. ಈ ಸುದ್ದಿ ನಾಡಿಗೆ ನಾಡೇ ಹೆಮ್ಮೆಪಡುವ ಸಂಗತಿ.ಇನ್ನು, ವಿಗ್ರಹವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾದಿದ್ದಾರೆ.
ಇತ್ತ ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಕೆತ್ತನೆಗೆ ದೇಶದ ವಿವಿಧೆಡೆಗಳ ಪ್ರಸಿದ್ಧ 12 ಮಂದಿ ಶಿಲ್ಪಶಾಸ್ತ್ರ ಪರಿಣತರನ್ನು ಕರೆಸಲಾಗಿತ್ತು. ಅವರಲ್ಲಿ ಮೂವರು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದೆ. ಶಿಲ್ಪಿಗಳು ರಾಮಲಲ್ಲಾನ ಮೂರ್ತಿ ಕೆತ್ತನೆಯ ಕೈಂಕರ್ಯದಲ್ಲಿ ಕಳೆದ ಆರು ತಿಂಗಳುಗಳಿಂದ ತೊಡಗಿದ್ದು,ಹಗಲಿರುಳು ಶ್ರಮಿಸುತ್ತಿದ್ದಾರೆ.ಈ ಮೂವರು ಶಿಲ್ಪಿ ಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಮೂಲದ ಹಾಗೂ ಪ್ರಸ್ತುತ ಬೆಂಗಳೂರು ಬನಶಂಕರಿಯ ನಿವಾಸಿ ಗಣೇಶ್ ಭಟ್ ಒಬ್ಬರು ಅನ್ನೋದು ಹೆಮ್ಮೆಯ ವಿಚಾರ.
ಗಣೇಶ್ ಭಟ್ ಅವರು ದೇಶ ವಿದೇಶಗಳಲ್ಲಿಯೂ ಭಾರಿ ಪ್ರಸಿದ್ಧರಾದವರು. ಹಲವು ಪ್ರಾತ್ಯಕ್ಷಿಕೆ, ಶಿಬಿರಗಳನ್ನು ಸಂಯೋಜಿಸಿದವರು. ಶಿಲ್ಪಕಲೆಗೆ ಅವರ ಕೊಡುಗೆಯನ್ನು ಗಮನಿಸಿಯೇ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ರಚನೆಗೆ ಆಹ್ವಾನ ಬಂದಿದೆ ಎನ್ನಲಾಗಿದ್ದು, ಇಡಗುಂಜಿಯ ಮುಖ್ಯ ಅರ್ಚಕರಾಗಿದ್ದ ದಿ.ಲಕ್ಷ್ಮೀನಾರಾಯಣ ಭಟ್ಟರ ದ್ವಿತೀಯ ಪುತ್ರ ಗಣೇಶ್ ಭಟ್ ಎಸ್ಸೆಸ್ಸೆಲ್ಸಿ ಮುಗಿಸಿ ಬಿಡದಿಯ ಕೆನರಾ ಬ್ಯಾಂಕ್ ಪ್ರಾಯೋಜಿತ ಕರಕುಶಲ ತರಬೇತಿ ಕೇಂದ್ರದಲ್ಲಿ ಶಿಲ್ಪಕಲಾ ಶಿಕ್ಷಕರಾಗಿ 600ಕ್ಕೂ ಹೆಚ್ಚು ಯುವ ಕಲಾವಿದರನ್ನು ತಯಾರು ಮಾಡಿದ ಹೆಗ್ಗಳಿಕೆ ಇವರದ್ದು.