ನ್ಯೂಸ್ ನಾಟೌಟ್: ಕಲಿಕೆಯಲ್ಲಿ ಹಲವಾರು ವಿಧಗಳಿವೆ. ಆದರೆ ಪರಿಸರದ ಮಧ್ಯದಲ್ಲಿ ನಿಂತು ಸೂರ್ಯನಿಗೆ ನಮಸ್ಕಾರ ಮಾಡಿ ಪೂಜೆ ನಡೆಸೋದಂದ್ರೆ ಅದರ ವಿಶೇಷತೆಯೇ ವಿಭಿನ್ನ ಮತ್ತು ವಿಶೇಷ. ಅಂತಹ ಆಚರಣೆಯನ್ನು ಕಳೆದ ಕೆಲವು ವರ್ಷಗಳಿಂದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅಂತೆಯೇ ಗುರುವಾರ ಸ್ನೇಹದಲ್ಲಿ ಸೂರ್ಯಾಲಯದ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆಯವರು, “ಸೂರ್ಯ ದೇವರ ಆರಾಧನೆಯನ್ನು ಪ್ರತಿ ವರ್ಷ ಡಿಸೆಂಬರ್ ನಲ್ಲಿ ನಾವು ಆಚರಿಸಿಕೊಂಡು ಬರುತ್ತಿದ್ದೇವೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ಚಲಿಸುವ ಈ ಶುಭ ಸಮಯದಲ್ಲಿ ನಾವು ಸೂರ್ಯಾಲಯದ ವಾರ್ಷಿಕೋತ್ಸವವಾಗಿ ಆಚರಿಸುತ್ತಿದ್ದೇವೆ’ ಎಂದು ತಿಳಿಸಿದರು.
ಮಕ್ಕಳು ಸೂರ್ಯಾಸ್ವಕ, ಗಣಪತಿ, ಅಥರ್ವಶೀರ್ಷ, ರಾಮರಕ್ಷೆ, ಗಾಯಂತ್ರಿಮಂತ್ರ ಇತ್ಯಾದಿ ಶ್ಲೋಕಗಳನ್ನು ಸುಮಾರು ಒಂದು ಗಂಟೆಯ ಕಾಲ ಪಠಿಸುವ ಮೂಲಕ ಪೂಜಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು. ಸ್ವತಃ ಸಂಸ್ಥೆಯ ಅಧ್ಯಕ್ಷರಾದ ದಾಮ್ಲೆಯವರೇ ಪೌರೋಹಿತ್ಯ ನಡೆಸಿ ಶ್ಲೋಕದ ಅರ್ಥವನ್ನು ವಿವರಿಸಿದ್ದು ವಿಶೇಷವಾಗಿತ್ತು. ಕೊನೆಯಲ್ಲಿ ಮಕ್ಕಳು ಹೆತ್ತವರ ಆಶೀರ್ವಾದ ಪಡೆಯುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಶಾಲಾ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ದಾಮ್ಲೆ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.