ನ್ಯೂಸ್ ನಾಟೌಟ್ : ಉಡುಪಿಯಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕಾಪು- ಉಡುಪಿ ಪ್ರಾಂತ್ಯದಲ್ಲಿ ಸಮಾಜ ಸೇವಕರಾಗಿ, ರಂಗಕಲಾವಿದರಾಗಿ, ಜನಾನುರಾಗಿಯಾಗಿ ಖ್ಯಾತಿ ಗಳಿಸಿದ್ದ ಕಾಪು ಲೀಲಾಧರ ಶೆಟ್ಟಿ ದಂಪತಿ ನಿನ್ನೆ ರಾತ್ರಿ ವೇಳೆ ಬದುಕನ್ನೇ ಕತ್ತಲನ್ನಾಗಿಸಿದ ಘಟನೆ ವರದಿಯಾಗಿದೆ.
ಮನೆಯಲ್ಲಿ ಘಟನೆಗೆ ಸಂಬಂಧಿಸಿ ಕೆಲವು ಕಾಗದದ ಪತ್ರಗಳು ಕಂಡು ಬಂದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ನಿನ್ನೆ ತಡರಾತ್ರಿ ಉಡುಪಿಯ ಕಾಪುವಿನ ತಮ್ಮ ಮನೆಯಲ್ಲಿ ಪತ್ನಿ ವಸುಂಧರಾ ಜೊತೆ ಕಾಪು ಲೀಲಾಧರ ಶೆಟ್ಟಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ತಮ್ಮ ಮನೆಯ ಪಕ್ಕಾಸಿಗೆ ಸೀರೆಯನ್ನು ಬಿಗಿದಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೀಲಾಧರ ಶೆಟ್ಟಿಯವರು ಸಮಾಜ ಸೇವಕರು, ಹಿರಿಯ ರಂಗ ಕಲಾವಿದರು, ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು ಆಗಿದ್ದರು. ಮಾತ್ರವಲ್ಲ ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.ಅವರಿಗೆ 68 ವರ್ಷ ಹಾಗೂ ಪತ್ನಿ ವಸುಂಧರಾ ಶೆಟ್ಟಿಯವರಿಗೆ 58 ವರ್ಷ ವಯಸ್ಸಾಗಿತ್ತು. ಕೌಟುಂಬಿಕ ಕಾರಣಗಳಿಂದ ಮನನೊಂದು ಈ ನಿರ್ಧಾರಕ್ಕೆ ಬಂದಿರಬಹುದೇ ಎಂದು ಶಂಕಿಸಲಾಗಿದೆ.
ಇವರ ಈ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ, ಸಮಾಜರತ್ನ ಪುರಸ್ಕಾರ ಸಹಿತವಾಗಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವ ಪಡೆದಿದ್ದರು. ಸಾವಿರಾರು ಮಂದಿಗೆ ಶಿಕ್ಷಣ, ಉದ್ಯೋಗ ದೊರೆಯಲು ಕಾರಣರಾಗಿದ್ದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅತ್ಯಾಪ್ತರಾಗಿದ್ದ ಲೀಲಾಧರ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿಯೂ ಚುನಾವಣೆಗೆ ಸ್ಪರ್ಧಿಸಿದ್ದರು.
ಬಹಳಷ್ಟು ರಾಜಕೀಯ ಮತ್ತು ಸಾಮಾಜಿಕ ನಾಯಕರಿಗೆ ಮಾರ್ಗದರ್ಶಕರಾಗಿದ್ದ ಅವರು ಮಜೂರು ನಾಗರಿಕ ಸಮಿತಿ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗ್ರಾ. ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆಸುಪಾಸಿನ ಹಲವಾರು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಲ್ಲಿ ಮುಂಚೂಣಿಯಲ್ಲಿದ್ದರು. ಪ್ರಸ್ತುತ ಕರಂದಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ, ಹೊಸಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗ್ರಾಮ ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.