ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸುತ್ತಮುತ್ತ ಬೆಕ್ಕಿನ ಜ್ವರ ಕಾಣಿಸಿಕೊಂಡಿದೆ. ವ್ಯಾಪಕವಾಗಿ ಹರಡುತ್ತಿರುವ ಬೆಕ್ಕಿನ ಜ್ವರದಿಂದ ಹಲವು ಬೆಕ್ಕುಗಳು ಬಲಿಯಾಗಿವೆ. ಮನೆಯಲ್ಲಿರುವ ಬೆಕ್ಕುಗಳಲ್ಲಿ ಜ್ವರ ಕಂಡು ಬಂದರೆ ತಕ್ಷಣ ಚುಚ್ಚು ಮದ್ದು ನೀಡಿದರೆ ಬದುಕಿಸಬಹುದು. ಇಲ್ಲದಿದ್ದರೆ ಸಾಯುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಏನಿದು ಬೆಕ್ಕಿನ ಜ್ವರ..? ಗುಣಲಕ್ಷಣಗಳೇನು..?
ಬೆಕ್ಕಿನ ಜ್ವರ ವೈರಸ್ ನಿಂದ ಹರಡುತ್ತಿದೆ. ಕಳೆದೆರಡು ತಿಂಗಳಿನಿಂದ ಸಂಪಾಜೆ ಗ್ರಾಮದ ಸುತ್ತಮುತ್ತ ಕ್ಷಿಪ್ತ ಗತಿಯಲ್ಲಿ ಹರಡುತ್ತಿದ್ದು ಬೆಕ್ಕು ಪ್ರಿಯರ ಆತಂಕಕ್ಕೆ ಕಾರಣವಾಗಿದೆ. ಹಲವು ಬೆಕ್ಕುಗಳು ಈಗಾಗಲೇ ಪ್ರಾಣ ಕಳೆದುಕೊಂಡಿವೆ. ಇನ್ನೂ ಕೆಲವು ಜ್ವರದಿಂದ ಮಂಕಾಗಿವೆ. ಈ ಬಗ್ಗೆ ಈಗಾಗಲೇ ತಜ್ಞರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಜ್ವರ ಬಂದ ಆರಂಭದಲ್ಲಿ ದೊಡ್ಡ ಬೆಕ್ಕುಗಳಿಗೆ ಚುಚ್ಚು ಮದ್ದು ನೀಡಿದರೆ ಬೆಕ್ಕು ಬದುಕಿ ಉಳಿಯುತ್ತದೆ. ಇಲ್ಲದಿದ್ದರೆ ಬದುಕುವುದು ಕಷ್ಟ. ಸಣ್ಣ ಮರಿ ಬೆಕ್ಕು ಆದರೆ ಅದಕ್ಕೆ ಟ್ಯಾಬ್ಲೆಟ್ ಮಾತ್ರ ಕೊಡಲಾಗುತ್ತದೆ. ಟ್ಯಾಬ್ಲೆಟ್ ತಿನ್ನದಿದ್ದರೆ ಬದುಕಿಸುವುದು ಕಷ್ಟವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಬೆಕ್ಕಿನ ಜ್ವರದಿಂದ ಬಳಲುತ್ತಿರುವ ಬೆಕ್ಕು ಸಾಮಾನ್ಯವಾಗಿ ಮಂಕಾಗಿರುತ್ತದೆ. ಯಾವುದೇ ಚಟುವಟಿಕೆ ಮಾಡುವುದಿಲ್ಲ. ಆಹಾರ ಸೇವಿಸುವುದಿಲ್ಲ. ಮೈ ಬಿಸಿ ಇರುತ್ತದೆ. ಇದೆಲ್ಲ ಲಕ್ಷಣಗಳಿದ್ದರೆ ತಕ್ಷಣ ನಿಮ್ಮ ಸಮೀಪದ ಪಶು ವೈದ್ಯಾಧಿಕಾರಿಯನ್ನು ಸಂಪರ್ಕಿಸುವುದು ಉತ್ತಮ.