- +91 73497 60202
- [email protected]
- November 22, 2024 11:04 AM
ಕಾಡಾನೆಯ ಕೋಪಕ್ಕೆ ರೈತ ಬಲಿಯಾದದ್ದೆಲ್ಲಿ..? ರೇಷ್ಮೆ ಹುಳುವಿಗೆ ಸೊಪ್ಪು ಹಾಕಲು ತೆರಳಿದ್ದಾತ ಮರಳಿ ಬರಲೇ ಇಲ್ಲ..!
ನ್ಯೂಸ್ ನಾಟೌಟ್ : ಕಾಡಾನೆ ತುಳಿದು ರೈತರೊಬ್ಬರು ಕೊನೆಯುಸಿರೆಳೆದಿರುವ ಘಟನೆ ಕನಕಪುರ ತಾಲೂಕಿನ ಆನೆಕೆರೆ ದೊಡ್ಡಿ ಗ್ರಾಮದ ಬಳಿ ಇಂದು(ಡಿ.17) ಬೆಳಗ್ಗೆ ನಡೆದಿದೆ. 63 ವರ್ಷದ ತಿಮ್ಮಯ್ಯ ಎಂಬುವರೇ ಮೃತ ರೈತ ಎಂದು ಗುರುತಿಸಲಾಗಿದ್ದು, ರೇಷ್ಮೆ ಕೃಷಿ ಮಾಡುತ್ತಿದ್ದರು ಎನ್ನಲಾಗಿದೆ. ಗ್ರಾಮದ ಪಕ್ಕಕ್ಕೆ ರೇಷ್ಮೆ ಹುಳುವಿನ ಮನೆ ಹೊಂದಿದ್ದ ರೈತ ತಿಮ್ಮಯ್ಯ, ಇಂದು ಮುಂಜಾನೆ ರೇಷ್ಮೆ ಹುಳುವಿಗೆ ಸೊಪ್ಪು ಹಾಕಲು ತೆರಳಿದ್ದರು. ನಂತರ ವಾಪಸ್ ಮನೆಗೆ ಬರುವ ವೇಳೆ ಕಾಡಾನೆ ದಾಳಿ ಮಾಡಿದೆ. ಈ ಆನೆ ದಾಳಿಗೆ ತಿಮ್ಮಯ್ಯ ಸ್ಥಳದಲ್ಲಿಯೇ ದುರಂತ ಅಂತ್ಯ ಕಂಡಿದ್ದಾರೆ. ಈ ಘಟನೆ ಬಗ್ಗೆ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಓಡೋಡಿ ಬಂದಿದ್ದು, ಘಟನೆ ನಡೆದ ಸ್ಥಳವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಟ್ಟಿದ್ದು ಎನ್ನಲಾಗಿದೆ. ಆನೆ ದಾಳಿ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಆದರೂ, ದಾಳಿಗಳು ಮಾತ್ರ ನಿರಂತರವಾಗಿ ಮುಂದುವರಿಯುತ್ತಲೇ ಇವೆ. ಇದೀಗ ಮತ್ತೊಬ್ಬ ರೈತ ಕೊನೆಯುಸಿರೆಳೆದಿರುವುದು ರೈತರ ವಲಯದಲ್ಲಿ ಆತಂಕವನ್ನು ಮೂಡಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ