ನ್ಯೂಸ್ ನಾಟೌಟ್ : ಕಳೆದೆರಡು ದಿನಗಳಿಂದ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ.ಈ ಹಿನ್ನಲೆಯಲ್ಲಿ ಆ ಭಾಗದಲ್ಲಿ ಸಮಸ್ಯೆಗಳು ತಲೆದೋರಿವೆ. ತೂತುಕುಡಿ, ತಿರುನಲ್ವೇಲಿ, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಯ ಕೆಲ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.
ಮಳೆಯಬ್ಬರಕ್ಕೆ ಮೂವರು ದುರಂತ ಅಂತ್ಯ ಕಂಡಿದ್ದು, ನಾಲ್ಕು ಜಿಲ್ಲೆಗಳಲ್ಲಿ 1,545 ಕುಟುಂಬಗಳ ಸುಮಾರು 7,500 ಜನರನ್ನು 84 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಒಟ್ಟು 425 ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತೂತುಕುಡಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದ್ದು, ಇಂದು ಕೂಡಾ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.ಇತ್ತ ಭಾರಿ ಮಳೆಯಾಗುತ್ತಿರುವ ತಿರುನಲ್ವೇಲಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಮನವಿಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ಪಂದಿಸಿದ್ದು,ಈ ಬಗ್ಗೆ ನವದೆಹಲಿಯಲ್ಲಿ ಪ್ರವಾಹ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಕುರಿತು ತುರ್ತು ಚರ್ಚೆಗಾಗಿ ಅವರನ್ನು ಖುದ್ದಾಗಿ ಭೇಟಿ ಮಾಡಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಳೆಯಿಂದಾಗಿ ಚೆನ್ನೈಗೆ ಹೋಗುವ ಚೆಂಡೂರ್ ಎಕ್ಸ್ಪ್ರೆಸ್ನಲ್ಲಿದ್ದ 800 ಕ್ಕೂ ಹೆಚ್ಚು ಪ್ರಯಾಣಿಕರು 24 ಗಂಟೆಗಳ ಕಾಲ ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಸೋಮವಾರ ಬೆಳಗಿನ ಜಾವ 1.30ರ ಸುಮಾರಿಗೆ 300 ಪ್ರಯಾಣಿಕರನ್ನು ಸಮೀಪದ ಶಾಲೆಯೊಂದರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದರೆ, ಉಳಿದ 500 ಮಂದಿ ಇನ್ನೂ ರೈಲಿನಲ್ಲಿ ಆಹಾರವಿಲ್ಲದೆ ಪರದಾಡುವಂತಾಯಿತು.