ನ್ಯೂಸ್ ನಾಟೌಟ್: ನಾಳೆಯಿಂದ ಈ ಸ್ಥಳಕ್ಕೆ ಬಂದು ಯಾವುದೇ ಕೃಷಿ ಕೆಲಸ ಮಾಡಿಸಬಾರದು, ಆಳುಗಳನ್ನು ಕರೆದುಕೊಂಡು ಬರಬಾರದು, ನಮ್ಮ ಮಾತನ್ನು ಕೇಳದೆ ಮರಳಿ ಬಂದರೆ ಜೀವನ ಸಹಿತ ಹೇಗೆ ವಾಪಸ್ ಹೋಗುತ್ತೀರಿ ನೋಡಿಕೊಳ್ಳುತ್ತೇವೆಂದು ಮಹಿಳೆಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಪುತ್ತೂರಿನ ಕೆದಂಬಾಡಿ ಗ್ರಾಮದ ನಿವಾಸಿ ಕೆ. ಸುಮಂಗಲ ಎಸ್ ಶರ್ಮ (46) ದೂರಿನಂತೆ ಇದೀಗ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 115-2023 ಕಲಂ:447,506,509 R/W 34 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪುತ್ತೂರು ತಾಲೂಕು ಪಾಣಾಜೆ ಗ್ರಾಮದಲ್ಲಿ ಜಮೀನು ಖರೀದಿಸಿದ್ದಾರೆ. ಈ ಜಮೀನಿನಲ್ಲಿ ದಿನಾಂಕ 30/11/2023 ರಂದು ಸಂಜೆ ಕೃಷಿ ಕೆಲಸ ಮಾಡಿಸುತ್ತಿದ್ದಾಗ ಸುಮಂಗಲ ಅವರು ವಾಸಕ್ಕೆಂದು ನಿರ್ಮಿಸಿದ ಮನೆ ಸ್ಥಳಕ್ಕೆ ದಿವಾಕರ ಕುಲಾಲ್, ಅವಿನಾಶ್ ಮತ್ತು ರಾಮಕೃಷ್ಣ ಭಟ್ ಅನ್ನುವ ಮೂವರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ.
“ನಾಳೆಯಿಂದ ಈ ಸ್ಥಳಕ್ಕೆ ಬಂದು ಯಾವುದೇ ಕೃಷಿ ಕೆಲಸ ಮಾಡಿಸಬಾರದು, ಇನ್ನೊಮ್ಮೆ ಕೃಷಿ ಕೆಲಸ ಮಾಡಿದ್ರೆ ಜೀವ ಸಹಿತ ವಾಪಸ್ ಹೋಗಲ್ಲ” ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸುಮಂಗಲ ಅವರ ಫೋಟೋವನ್ನು ಅವಿನಾಶ ಕೆ ಮತ್ತು ರಾಮಕೃಷ್ಣ ಭಟ್ ತೆಗೆದಿದ್ದು ಅವರ ಖಾಸಗಿ ತನಕ್ಕೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.