ನ್ಯೂಸ್ ನಾಟೌಟ್ :ಕರಾವಳಿಯಲ್ಲಿ ಧರ್ಮದಂಗಲ್ ಮುಂದುವರಿದಿದೆ. ಜಾತ್ರೆಗಳು ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ (Karavali)ಮತ್ತೆ ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ಬಹಿಷ್ಕಾರ ಹಾಕಲಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ರಾಜ್ಯದ ಹಲವೆಡೆ ವ್ಯಾಪಾರ ಧರ್ಮ ದಂಗಲ್ ಜೋರಾಗಿಯೇ ನಡೆದಿತ್ತು. ಪ್ರಮುಖವಾಗಿ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿತ್ತು.ಕಳೆದ ವರ್ಷ ಉಡುಪಿಯ ಬಪ್ಪನಾಡು ದೇವಸ್ಥಾನದಲ್ಲಿ ಈ ಬಗ್ಗೆ ಭಾರಿ ವಿವಾದಗಳೇ ಆಗಿದ್ದವು. ಮುಸ್ಲಿಮರೇ ಕಟ್ಟಿಸಿದ ದೇವಾಲಯದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗಿಲ್ಲ ಅವಕಾಶವೆನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಡಿಸೆಂಬರ್ 14ರಂದು ನಡೆಯುವ ಮಂಗಳೂರಿನ ಕುಡುಪು ಶ್ರೀಅನಂತಪದ್ಮನಾಭ (Kudupu Shree Anantha Padmanabha Temple) ಕ್ಷೇತ್ರದ ಚಂಪಾ ಷಷ್ಠಿ ಮಹೋತ್ಸವದಲ್ಲೂ ಅನ್ಯ ಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ ಹೇರಬೇಕೆಂಬ ಆರೋಪ ಕೇಳಿಬಂದಿದೆ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿರೋದ್ರಿಂದ ಇಲಾಖೆಯ ಸುತ್ತೋಲೆಯಂತೆ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ.ಹೀಗಾಗಿ ಕ್ಷೇತ್ರದ ಆಡಳಿತ ಮಂಡಳಿ ಈ ಬಾರಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿಲ್ಲ. ಕ್ಷೇತ್ರದ ಈ ನಿರ್ಧಾರವನ್ನು ಹಿಂದೂಪರ ಸಂಘಟನೆಗಳು ಸ್ವಾಗತಿಸಿದೆ. ದೇವಸ್ಥಾನದ ಸುತ್ತಮುತ್ತ ಇರುವ ಜಾಗವೆಲ್ಲಾ ಕ್ಷೇತ್ರದ್ದು, ಜೊತೆಗೆ ಮುಂದೆ ಇರೋ ರಸ್ತೆಯೂ ದೇವಸ್ಥಾನದ ರಥಬೀದಿ. ಹೀಗಾಗಿ ಈ ಜಾಗದಲ್ಲಿ ಬಿಟ್ಟು ಬೇರೆ ಜಾಗದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡೋದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದು ಹಿಂದೂ ಸಂಘಟನೆಗಳು ಸ್ಪಷ್ಟಪಡಿಸಿದೆ.
ಸುಮಾರು 50, 60 ವರ್ಷಗಳಿಂದ ಕುಡುಪು ಕ್ಷೇತ್ರದಲ್ಲಿ ನಡೆಯೋ ಜಾತ್ರೆಯಲ್ಲಿ ಸರ್ವ ಧರ್ಮೀಯರೂ ವ್ಯಾಪಾರ ನಡೆಸೋ ಮೂಲಕ ಸೌಹಾರ್ದಯುತವಾಗಿ ನಡೆಯುತ್ತಿತ್ತು. ಕಳೆದ ವರ್ಷ ಧರ್ಮದಂಗಲ್ ಜೋರಾಗಿದ್ದ ಕಾರಣ ಅನ್ಯ ಮತೀಯರು ಇಲ್ಲಿ ವ್ಯಾಪಾರಕ್ಕೆ ಮುಂದಾಗಿರಲಿಲ್ಲ.ಆದ್ರೆ ಈ ಬಾರಿಯೂ ಹಿಂದೂ ಸಂಘಟನೆಗಳು ಮತ್ತೆ ಅಪಸ್ವರ ಎತ್ತಿವೆ.
ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಹಾಗೂ ದೇವಸ್ಥಾನಕ್ಕೆ ಸೇರಿದ್ದ ಜಾತ್ರಾ ಗದ್ದೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ನಿಜ. ಆದ್ರೆ ದೇವಸ್ಥಾನದ ಜಾತ್ರಾ ವ್ಯಾಪಾರ ಸರ್ಕಾರಿ ಜಮೀನಿನಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಆಗೋದಾದ್ರೆ ಈ ಕಾನೂನು ಅನ್ವಯ ಆಗೋದಿಲ್ಲ ಎಂದು ಹೇಳಲಾಗಿದೆ.