ನ್ಯೂಸ್ ನಾಟೌಟ್: ಇತ್ತೀಚೆಗೆಗಷ್ಟೇ ಸಂಸತ್ತಿಗೆ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಸಂಸತ್ತಿನಲ್ಲಿ ನಡೆದ ಭದ್ರತಾಲೋಪದ ಪ್ರಕರಣ ತನಿಖೆಯಲ್ಲಿರುವಾಗ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ.
ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504 , 153ರ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನಿನ್ನೆ ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುತ್ತಾ ಸೋಮಾರಿ ಸಿದ್ದ ಎಂದು ಹೇಳಿಕೆ ನೀಡಿದ್ದರು. ಇದು ಅವಹೇನಕಾರಿ ಪದವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಪ್ರತಾಪ್ ಸಿಂಹರಿಂದ ಹಿಂದು ಮತ್ತು ಮುಸ್ಲಿಂ ನಡುವೆ ಕೋಮು ಗಲಭೆ ಸೃಷ್ಟಿಸಲು ನಿರಂತರ ಪ್ರಯತ್ನ ಎಂದು ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ ವಿಜಯಕುಮಾರ್ ಲಿಖಿತ ದೂರು ನೀಡಿದ್ದರು. ಅವರು ನೀಡಿರುವ ದೂರಿನ ಪ್ರಕಾರ ದೇವರಾಜ್ ಪೊಲೀಸ್ ಠಾಣೆಯಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಲ್ಲದೆ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ದ್ವೇಷ ಹರಡುತ್ತಿದ್ದಾರೆಂದು ಸಹ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ನಿನ್ನೆ ರಾತ್ರಿ ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂತೆಗೆದುಕೊಂಡರು.
ಹುಣಸೂರಿನಲ್ಲಿ ನಿನ್ನೆ(ಡಿ.26) ನಡೆದ ಹನುಮ ಜಯಂತಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನವರೆಗೂ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ದಾರೆ. ನನ್ನ ಭಯೋತ್ಪಾದಕ ಅಂತ ಬಿಂಬಿಸುವ ಪ್ರಯತ್ನ ಕಾಂಗ್ರೆಸಿಗರು ಮಾಡಿದರು. ಮುಸ್ಲಿಮರೆಲ್ಲಾ ಭಯೋತ್ಪಾದಕರು ಅನ್ನೋ ರೀತಿ ನನಗೆ ಮುಸ್ಲಿಂ ವೇಷ ತೊಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು. ಸಂಸತ್ ವಿಚಾರದಲ್ಲಿ ನಾನು ಸ್ಪಷ್ಟನೆ ಕೊಟ್ಟ ಬೆನ್ನಲ್ಲೆ ಪ್ರತಾಪ್ ಸಿಂಹ ಸಹೋದರ ಮರಗಳ್ಳ ಅಂತಾ ಕಾಂಗ್ರೆಸ್ ನವರು ಪೋಸ್ಟ್ ಮಾಡಿದ್ದರು ಎಂದಿದ್ದಾರೆ.