ನ್ಯೂಸ್ ನಾಟೌಟ್ : ಅಯ್ಯಪ್ಪನ (Ayyappa) ದರ್ಶನಕ್ಕೆಂದೇ 48 ದಿನಗಳವರೆಗೂ ವ್ರತ ಆಚರಿಸಿ ಶಬರಿಮಲೆಗೆ (Sabarimala) ತೆರಳಿದ್ದ ಕರ್ನಾಟಕ (Karnatka) ಸೇರಿ ಹಲವು ರಾಜ್ಯಗಳ ಭಕ್ತರು, ಅಯ್ಯಪ್ಪನ ದರ್ಶನ ಮಾಡಲಾಗದೆಯೇ ಮರಳುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.ಈ ಮಧ್ಯೆ ಅಯ್ಯಪ್ಪನ ಸನ್ನಿಧಿಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತ ಸಾಗರ ಕಂಡು ಬಂದಿದ್ದು, ಗುಂಪಿನಲ್ಲಿ ಸಿಲುಕಿ ಬಾಲಕಿ ಕೊನೆಯುಸಿರೆಳೆದಿದ್ದಾಳೆನ್ನುವ ಆಘಾತಕಾರಿ ಘಟನೆ ವರದಿಯಾಗಿದೆ.
ಪದ್ಮಶ್ರೀ ಎಂಬ ಬಾಲಕಿ ಅಪ್ಪಾಚಿಮೇಡು ಎಂಬಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.ಪದ್ಮಶ್ರೀ ಉಸಿರಾಟದ ತೊಂದರೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ತಿಳಿಸಲಾಗಿದೆ.ಎಲ್ಲಾ ಪ್ರಯತ್ನಗಳ ಹೊರತಾಗಿಯೂ,ಅವರು ಅಪ್ಪಾಚಿಮೇಡುವಿನ ಹೃದ್ರೋಗ ಚಿಕಿತ್ಸಾ ಕೇಂದ್ರದಲ್ಲಿ ಸಂಜೆ 4 ರಿಂದ 5 ಗಂಟೆಯ ನಡುವೆ ಉಸಿರು ಚೆಲ್ಲಿದ್ದಾಳೆ.
ಇತ್ತ ಭಕ್ತರ ನಿರ್ವಹಣೆ, ಭಕ್ತರ ವಾಹನಗಳ ನಿರ್ವಹಣೆಯಲ್ಲಿ ಟ್ರಾವಂಕೂರು ದೇವಸ್ಥಾನ ಮಂಡಳಿ (Travancore Devaswom Board) ಮತ್ತು ಪೊಲೀಸರು ಪೂರ್ಣ ವಿಫಲರಾಗಿದ್ದು ಕೇರಳ ಸರ್ಕಾರದ (Kerala Government) ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದೆ.ದೇವರ ದರ್ಶನಕ್ಕೆ ಭಕ್ತರು ಹಲವು ಗಂಟೆಗಳ ಕಾಲ ಅನ್ನ, ನೀರು ಇಲ್ಲದೇ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಪೊಲೀಸರು ಭಕ್ತರ ಮೇಲೆಯೇ ಹಲ್ಲೆ ನಡೆಸಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ನೀಲಕ್ಕಲ್ನಲ್ಲಿ ತಂದೆಯಿಂದ ತಪ್ಪಿಸಿಕೊಂಡ ಪುಟ್ಟ ಬಾಲಕನೊಬ್ಬ ಬಸ್ಸಿನಲ್ಲೇ ತಂದೆಯನ್ನು ಹುಡುಕಿಕೊಡುವಂತೆ ಕಣ್ಣೀರೀಟ್ಟು ಕೈಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಲಕ ಕಣ್ಣೀರಿಟ್ಟ ಕೆಲ ಹೊತ್ತಿನಲ್ಲೇ ಆತನ ತಂದೆ ವಾಹನದ ಬಳಿ ಪುತ್ರನನ್ನು ಸಂತೈಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.