- +91 73497 60202
- [email protected]
- November 22, 2024 2:36 PM
ನ್ಯೂಸ್ ನಾಟೌಟ್: ಇತ್ತೀಚೆಗೆ ಕರಾವಳಿಯ ಬಜರಂಗದಳ ಕಾರ್ಯಕರ್ತರ ಮೇಲೆ ಸರ್ಕಾರ ಗಡಿಪಾರಿಗೆ ಕಾರಣ ಕೇಳಿ ಶೋಕಾಸ್ ನೊಟೀಸ್ ನೀಡಿತ್ತು. ಈ ನಡುವೆ ಮತ್ತೊಮದು ಬೆಳವಣಿಗೆ ನಡೆದಿದ್ದು, ಕುಟುಂಬಸ್ಥರ ವಿರೋಧದ ನಡುವೆಯೇ ಪರಸ್ಪರ ಪ್ರೀತಿಸಿದ್ದ ಅನ್ಯ ಧರ್ಮಿಯ ಯುವಕ ಯುವತಿಯನ್ನು ಪೊಲೀಸ್ ಠಾಣೆಯಲ್ಲಿಯೇ ಬಜರಂಗ ದಳದ ಕಾರ್ಯಕರ್ತರು ಮದುವೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಮಾಯಕಾರ್ ಹಾಗೂ ಅದೇ ಗ್ರಾಮದ ಉಮೆಕುಲ್ಸುಮಾ ಕರಿಗಾರ ಅನ್ನೋ ಯುವಕ-ಯುವತಿ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ಮನೆಯವರಿಗೆ ಗೊತ್ತಾದಾಗ, ಯುವತಿ ಮನೆಯಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪರಸ್ಪರ ರಿಜಿಸ್ಟ್ರಾರ್ ವಿವಾಹಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಿದರು. ಬಳಿಕ ಯುವತಿ ಮನೆ ಬಿಟ್ಟು ಯುವಕನ ಬಳಿ ಓಡಿ ಬಂದಳು. ಈ ಸುದ್ದಿ ತಿಳಿದ ಬಳಿಕ ಯುವತಿ ಮನೆಯವರು ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಅಂತಾ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಮಂಜುನಾಥನ ಮನೆಯವರನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿ, ಕಳಿಸಿದ್ದರು. ಮಂಜುನಾಥ ಪೊಲೀಸರಿಂದ ಒತ್ತಡ ಬಂದ ಹಿನ್ನೆಲೆ ಉಮೆಕುಲ್ಸುಮಾಳನ್ನು ಕರೆದುಕೊಂಡು ಠಾಣೆಗೆ ಬಂದಿದ್ದರು. ಈ ವೇಳೆ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಿದ ಪೊಲೀಸರು, ಯುವಕನನ್ನು ವಶಕ್ಕೆ ಪಡೆದಿದ್ದರು. ಯುವಕ ಮತ್ತು ಯುವತಿ ಮದುವೆ ವಯಸ್ಸಿಗೆ ಬಂದವರಾದರೆ ಧರ್ಮ, ಜಾತಿ ಯಾವುದೇ ಇರಲಿ, ಪರಸ್ಪರ ಒಪ್ಪಿ ಮದುವೆ ಆಗೋದಕ್ಕೆ ಕಾನೂನು ಸಮ್ಮತಿಸುತ್ತದೆ. ಆದರೆ, ಈ ರೀತಿ ಆಗಿದ್ದ ಮದುವೆಯೊಂದನ್ನು ಮುರಿದು, ಪ್ರೇಮಿಗಳನ್ನು ಬೇರ್ಪಡಿಸಲು ಸ್ವತಃ ಪೋಷಕರ ಜತೆ ಪೊಲೀಸರು ಮುಂದಾಗಿದ್ದರು. ಆದರೆ, ಕೊನೆಗೆ ಬಜರಂಗದ ಒತ್ತಡದ ನಡುವೆ ಆ ಪೊಲೀಸರು ತಮ್ಮ ಠಾಣೆಯಲ್ಲಿಯೇ ಆ ಜೋಡಿಗೆ ಮದುವೆ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಮದುವೆಯಾಗಿದ್ದು, ಯುವತಿ ತಾನು ಒಪ್ಪಿ ಮದುವೆಯಾಗಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದರಿಂದ ಪೊಲೀಸರು ಕಿಡ್ನಾಪ್ ಕೇಸ್ ಕೈಬಿಟ್ಟಿದ್ದಾರೆ. ಅಲ್ಲದೇ ತನ್ನ ಮನೆಯವರಿಂದ ನನ್ನ ಪತಿ ಹಾಗೂ ಪತಿಯ ಮನೆಯವರಿಗೆ ಜೀವ ಬೆದ* ರಿಕೆ ಇದೆ ಎಂದು ಪೊಲೀಸರಿಗೆ ದೂರು ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ