ನ್ಯೂಸ್ ನಾಟೌಟ್: ಮಾಜಿ ಸೈನಿಕರೊಬ್ಬರ ತಲೆಗೆ ದೊಣ್ಣೆಯಲ್ಲಿ ಹೊಡೆದು ಜೀವ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸುತ್ತಿದ್ದ ಆರೋಪಿಗೆ ಸುಳ್ಯ ನ್ಯಾಯಾಲಯ 10 ಸಾವಿರ ರೂ. ದಂಡ ತಪ್ಪಿದ್ರೆ 6 ತಿಂಗಳು ಜೈಲುವಾಸ ಶಿಕ್ಷೆಯನ್ನು ವಿಧಿಸಿದೆ. ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಬಿ.ಮೋಹನ್ ಬಾಬು ಕಲಂ 504, 506 ರಲ್ಲಿ ಆರೋಪ ಸಾಬೀತಾಗದೆ ಆ ಆರೋಪದಿಂದ ದೋಷಮುಕ್ತಗೊಳಿಸಿ ಕಲಂ 324 ರಡಿಯಲ್ಲಿ ಅಪರಾಧ ಎಸಗಿರುವುದು ಸಾಬೀತಾಗಿರುತ್ತದೆ ಎಂದು ಶಿಕ್ಷೆ ವಿಧಿಸಿರುತ್ತಾರೆ. ಕಲಂ 324ರ ಅಪರಾಧಕ್ಕೆ ನ್ಯಾಯಾಲಯವು ರೂ.10,000 ರೂ. ದಂಡ, ಜುಲ್ಮಾನೆ ಕಟ್ಟದ ಪಕ್ಷದಲ್ಲಿ 6 ತಿಂಗಳ ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ.
ಭಾರತೀಯ ವಾಯುದಳದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಅಡ್ಡಂತಡ್ಕ ದೇರಣ್ಣ ಗೌಡರು ಪೇರಾಲು ಅಂಚೆ ಕಚೇರಿಯ ಸಮೀಪದ ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ಆರೋಪಿ ನಾಗೇಶ ಎಂಬಾತ ಹಿಂಬದಿಯಿಂದ ಏಕಾಏಕಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ದೊಣ್ಣೆಯಿಂದ ದೇರಣ್ಣ ಗೌಡರ ತಲೆಗೆ ಹೊಡೆದಿದ್ದ. ಗೌಡರು ಇದರಿಂದ ಗಾಯಗೊಂಡಿದ್ದರು. ಗೌಡರು ಪಂಚಾಯತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಮಂಡೆಕೋಲು ಪಂಚಾಯತ್ ಗೆ ಕಾಯ್ದಿರಿಸಿದ್ದ ಜಾಗವನ್ನು ಆರೋಪಿಯು ತನ್ನ ಹೆಸರಿಗೆ ಅಕ್ರಮವಾಗಿ ಮಾಡಿಸಿಕೊಂಡಿದ್ದರು ಎಂದು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಿರಂತರ ಹೋರಾಟವನ್ನು ಗೌಡರು ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೋಪಗೊಂಡು ಆರೋಪಿ ಕೃತ್ಯ ಎಸಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು