ನ್ಯೂಸ್ ನಾಟೌಟ್: ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಅಧ್ಯಕ್ಷರಾಗಿ ಬ್ರಿಜ್ ಭೂಷನ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆಯಾದ ಒಂದು ದಿನದ ಬಳಿಕ, ಪ್ರತಿಭಟನಾ ನಿರತ ಕುಸ್ತಿಪಟುಗಳ ಆಕ್ರೋಶ ಮತ್ತಷ್ಟು ಹೆಚ್ಚಾಗಿದ್ದು, ಭಾರತೀಯ ಕುಸ್ತಿ ಒಕ್ಕೂಟ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾದ ತಕ್ಷಣವೇ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಪ್ರತಿಭಟನೆಯ ಸಂಕೇತವಾಗಿ ಕ್ರೀಡೆಯಿಂದ ನಿವೃತ್ತಿ ಘೋಷಿಸಿದರು. ಈ ಬೆನ್ನಲ್ಲೆ ಮತ್ತೊಂದು ಬೆಳವಣಿಗೆ ನಡೆದಿದೆ.
ಇದೇ ವೇಳೆ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ಹಿಂದಿರುಗಿಸುವುದಾಗಿ ಭಾರತೀಯ ಕುಸ್ತಿಪಟು ಭಜರಂಗ್ ಪುನಿಯಾ ಶುಕ್ರವಾರ, ಡಿಸೆಂಬರ್ 22ರಂದು ಘೋಷಿಸಿದ್ದಾರೆ.
ಡಬ್ಲ್ಯುಎಫ್ಐ ನೂತನ ಅಧ್ಯಕ್ಷ ಸಂಜಯ್ ಸಿಂಗ್ ಅವರು ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಪರಮಾಪ್ತರಾಗಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನಾ ಕುಸ್ತಿಪಟುಗಳು ಲೈಂ* ದೌರ್ಜನ್ಯದ ದೂರು ನೀಡಿದ್ದರು. ಇತ್ತೀಚಿಗೆ ನಡೆದ ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಬೆಂಬಲ ಸಮಿತಿಯು ಹೆಚ್ಚು 15 ಹುದ್ದೆಗಳಲ್ಲಿ 13 ಹುದ್ದೆಗಳನ್ನು ಸುಲಭವಾಗಿ ಗೆದ್ದಿದ್ದಾರೆ.
ಟೊಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಭಜರಂಗ್ ಪುನಿಯಾ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ “ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಮಂತ್ರಿಗೆ ಹಿಂದಿರುಗಿಸುತ್ತಿದ್ದೇನೆ. ಅದನ್ನು ಘೋಷಿಸಲು ಇದು ನನ್ನ ಪತ್ರವಾಗಿದೆ. ಇದು ನನ್ನ ಹೇಳಿಕೆಯಾಗಿದೆ,” ಎಂದು ಬರೆದುಕೊಂಡಿದ್ದಾರೆ.