ನ್ಯೂಸ್ ನಾಟೌಟ್: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರಂತ ಅಂತ್ಯದ ಸುದ್ದಿಯನ್ನು ಅರಗಿಸಿಕೊಳ್ಳೋದಕ್ಕೂ ಕಷ್ಟವಾಗುತ್ತಿದೆ. ಈ ಮಧ್ಯೆ ಅರ್ಜುನ ಉಸಿರು ಚೆಲ್ಲಿರುವ ಬಗ್ಗೆ ನಾನಾ ಅನುಮಾನಗಳು ಮೂಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ.ಮಾತ್ರವಲ್ಲ ಪ್ರತಿಭಟನೆಗಳು ನಡೆದಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ್ದಾರೆ.ಅರ್ಜುನ ದುರಂತ ಅಂತ್ಯ ಕುರಿತಂತೆ ತನಿಖೆ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಅರ್ಜುನ 8 ಬಾರಿ ಅಂಬಾರಿ ಹೊತ್ತಿದ್ದಾನೆ. ಆತ ಸಾವಿಗೀಡಾಗಿರುವುದು ದುರಂತದ ವಿಷಯ. ಅದು ಇನ್ನು ಬದುಕಿ ಬಾಳಬೇಕಾದ ಆನೆ. ಅದನ್ನು ಇನ್ನೊಂದು ಆನೆ ಹಿಡಿಯಲಿಕ್ಕೆ ಬಳಸಿದುದದರ ಬಗ್ಗೆ ತನಿಖೆ ಮಾಡಿ ಅಂತ ಹೇಳಿದ್ದೇನೆ. ಅದರ ಬಗ್ಗೆ ಸಂಪೂರ್ಣ ವಿಚಾರ ಬಂದ ಮೇಲೆ ಪ್ರಸ್ತಾಪ ಮಾಡ್ತೇನೆ. ಆದರೆ ಅರ್ಜುನ ಆನೆ ಸಕಲೇಶಪುರದಲ್ಲಿ ಎಲ್ಲಿ ಪ್ರಾಣ ಕಳೆದುಕೊಂಡಿತು ಅಲ್ಲಿ ಒಂದು ಸ್ಮಾರಕ ಮಾಡಲು ಹಾಗೂ ಹೆಗ್ಗಡದೇವನಕೋಟೆಯಲ್ಲಿ ಸಹ ಸ್ಮಾರಕ ಮಾಡಬೇಕು ಹೇಳಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ಅರ್ಜುನ ಆನೆ ಬಾರದ ಲೋಕಕ್ಕೆ ತೆರಳಿತ್ತು. ಆದರೆ ಸ್ಥಳೀಯರು ಮಾತ್ರ ಅರಣ್ಯಾಧಿಕಾರಗಳ ಎಡವಟ್ಟಿನಿಂದ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ನಿನ್ನೆಯಷ್ಟೇ ಅರ್ಜುನನ ಕುರಿತು ಕಾವಾಡಿಗರು ಮಾತನಾಡಿಕೊಳ್ಳುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
22 ವರ್ಷಗಳ ಕಾಲ ವಿಶ್ವವಿಖ್ಯಾತ ದಸರಾದಲ್ಲಿ ಭಾಗವಹಿಸಿದ್ದ ಸಾಕಾನೆ ಅರ್ಜುನ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ. ಈ ಬಾರಿ ಜಂಬೂಸವಾರಿಯಲ್ಲಿಯೂ ನಿಶಾನೆ ಆನೆಯಾಗಿ ಅರ್ಜುನ ಭಾಗಿಯಾಗಿದ್ದ. ಆನೆಗೆ 65 ವರ್ಷ ವಯಸ್ಸಾಗಿತ್ತು.