ನ್ಯೂಸ್ ನಾಟೌಟ್ : ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ ‘ಗೃಹಲಕ್ಷ್ಮಿ’. ರಾಜ್ಯದ ಜನರಿಗೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಇದು ಸಹ ಒಂದು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಯೋಜನೆ ಹಣ ಬೇರೆ ಕಡೆ ಅನುಮತಿ ಇಲ್ಲದೆ ಬಳಕೆಯಾಗುತ್ತಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
“ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ ನೀಡಲಾಗುವ 2,000 ರೂ. ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕಾರಣ ಬ್ಯಾಂಕ್ ಅಧಿಕಾರಿಗಳು ಈ ಹಣವನ್ನು ಫಲಾನುಭವಿ ಸಾಲದ ವಸೂಲಾತಿಗೆ ಬಳಕೆ ಮಾಡುತ್ತಿರುವ ಕ್ರಮ ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಚಿತ್ತಾಪೂರ ತಾಲೂಕಿನ ತರಕಸಪೇಟೆ ಗ್ರಾಮಕ್ಕೆ ಭೇಟಿ ನೀಡಿದಾಗ, ಮಹಿಳೆಯೊಬ್ಬಳು ಯೋಜನೆಯಡಿ ಬಂದ 2,000 ರೂ. ಹಣವನ್ನು ನಾಲವಾರದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಗಿರೀಶ್ ಸಾಲ ವಸೂಲಾತಿಗೆ ಬಳಕೆ ಮಾಡಿಕೊಂಡಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗ್ಯಾರಂಟಿ ಯೋಜನೆಯಡಿ ಇದೂವರೆಗೆ ಪಾವತಿ ಮಾಡಿಕೊಂಡ ಹಣ ವಾಪಸ್ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಕ್ರಮವಹಿಸಿ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್ ಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.