ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ 1,450 ಕೋಟಿ ರೂಪಾಯಿಗೆ ಅಧಿಕ ಖರ್ಚಿನಲ್ಲಿ ಅಭಿವೃದ್ಧಿ ಪಡಿಸಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯೆ ಧಾಮವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಡಿಸೆಂಬರ್ 30, ಶನಿವಾರ) ಉದ್ಘಾಟಿಸಿದರು.
ಯುಪಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯಾನಾಥ, ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ ಹಾಗೂ ಇತರರು ಉಪಸ್ಥಿತರಿದ್ದರು.
ಅಯೋಧ್ಯೆ ವಿಮಾನ ನಿಲ್ದಾಣ ಧಾರ್ಮಿಕ ಪ್ರಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಶಕ್ತಿ ಹೆಚ್ಚಿಸಿದ್ದು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಜೀವನದ ಥೀಮ್ ಆಧರಿಸಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯೆ ಧಾಮದಿಂದ ಸ್ಥಳೀಯ ಆರ್ಥಿಕತೆ ಹೆಚ್ಚಳ ಹಾಗೂ ಧಾರ್ಮಿಕ ಪ್ರವಾಸೋಧ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಯೋಧ್ಯೆ ನಗರದಿಂದ 15 ಕಿಲೋ ಮೀಟರ್ ದೂರಲ್ಲಿ ವಿಮಾನ ನಿಲ್ದಾಣವಿದೆ. ಪ್ರಧಾನಿ ಮೋದಿ ಇಂದು ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆಯಲ್ಲಿ ಹೂಗಳಿಂದ ಅಲಂಕಾರ ಮಾಡಲಾಗಿದೆ. ಅಯೋಧ್ಯೆಯಲ್ಲಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಮುಖ ಪ್ರವೇಶ ದ್ವಾರವನ್ನು ರಾಮ ಮಂದಿರಕ್ಕೆ ಬಳಸಿದ ಕೆತ್ತಿದ ಸ್ತಂಭಗಳದ ಮಾದರಿಯಲ್ಲಿ ನಿರ್ಮಿಸಲಾಗಿದೆ.
ನಿಲ್ದಾಣ ಒಳಗಡೆಯ ಮೇಲ್ಭಾಗದಲ್ಲೂ ಶ್ರೀರಾಮನ ಜೀವನವನ್ನು ಸಾರುವ ವರ್ಣರಂಚಿತ ಚಿತ್ರಗಳನ್ನು ಬಿಡಿಸಲಾಗಿದೆ. ಅಯೋಧ್ಯೆಯಲ್ಲಿರು ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ.
ಅತ್ಯಾಧುನಿಕ ವಿಮಾನ ನಿಲ್ದಾಣದ 1ನೇ ಹಂತವನ್ನು 1,450 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು 6,500 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸುಸಜ್ಜಿತವಾಗಿದೆ. ಟರ್ಮಿನಲ್ ಕಟ್ಟಡದ ಮುಂಭಾಗವು ಅಯೋಧ್ಯೆ ಶ್ರೀ ರಾಮ ಮಂದಿರದ ದೇವಾಲಯದ ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ. ಟರ್ಮಿನಲ್ ಕಟ್ಟಡದ ಒಳಭಾಗದಲ್ಲಿ ಭಗವಾನ್ ಶ್ರೀರಾಮನ ಜೀವನ ಚಿತ್ರಿಸುವ ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.
ಅಯೋಧ್ಯೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಎಲ್ಇಡಿ ಲೈಟಿಂಗ್, ಮಳೆ ನೀರು ಕೊಯ್ಲು, ಕಾರಂಜಿಗಳು, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಸೌರ ವಿದ್ಯುತ್ ಸ್ಥಾವರ ಮತ್ತು ಇತರ ಒಳಗೊಂಡ ಹಲವು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಗೃಹ – 5 ಸ್ಟಾರ್ ರೇಟಿಂಗ್ ಗೆ ಅನುಗುಣವಾಗಿ ಈ ವೈಶಿಷ್ಟ್ಯಗಳನ್ನು ರೂಪಿಸಲಾಗಿದೆ.