ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಮತ್ತಷ್ಟು ಏರಿಕೆಯಾಗಲಿದೆಯಾ..? ಎಷ್ಟು ರೂ. ಹೆಚ್ಚಳವಾಗಲಿದೆ?

ನ್ಯೂಸ್ ನಾಟೌಟ್ : ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು (Nandini Milk, Curd) ದರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.ಈ ಸಂಬಂಧ ಅಧಿವೇಶನದಲ್ಲಿ ಸರ್ಕಾರ ದರ ಏರಿಸುವ ಸುಳಿವು ನೀಡಿದೆ ಎನ್ನಲಾಗಿದೆ. ಇತರೇ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಸರ್ಕಾರ ಹೇಳಿದೆ. ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ಹೇಳಿಕೊಂಡಿದ್ದು, ದರ ಹೆಚ್ಚಳದ ಕುರಿತು ಮಾಲೂರು ಶಾಸಕ ಕೆ ವೈ ನಂಜೇಗೌಡ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಈ ಉತ್ತರ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡರೆ ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ. ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಈಗಾಗಲೇ ಚಿಂತನೆ ನಡೆಸಿದೆ. ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್‌ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.