ನ್ಯೂಸ್ ನಾಟೌಟ್: ಮಂಗಳಮುಖಿಯೊಬ್ಬರು ತನ್ನ ಸ್ವಂತ ಖರ್ಚಿನಲ್ಲಿ ಎರಡು ನವ ಜೋಡಿಗಳಿಗೆ ಮದುವೆ ಮಾಡಿಸಿ ಎಲ್ಲೆಡೆ ಸುದ್ದಿಯಾಗಿದ್ದಾರೆ.
ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ಮಂಗಳಮುಖಿ ಜಮುನಾ ಎಂಬುವವರು ಭಿಕ್ಷಾಟನೆಯಿಂದ ಬಂದ ಹಣದಿಂದ ತನ್ನ ಗ್ರಾಮದ ಬಡ ಜೋಡಿಗಳಿಗೆ ಮದುವೆ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಈ ಕುರಿತು ಮಂಗಳಮುಖಿ ಜಮುನಾ ಮಾತನಾಡಿ, “ನಾನು ಕಳೆದ ನಾಲ್ಕು ವರ್ಷಗಳಿಂದ ಭಿಕ್ಷಾಟನೆ ಮಾಡಿ ಸ್ವಲ್ಪ ಹಣವನ್ನು ನಾನು ಇಟ್ಟುಕೊಂಡು, ಉಳಿದ ಹಣವನ್ನು ಬಡವರಿಗೆ ದಾನ ಮಾಡುತ್ತಿದ್ದೇನೆ. ನಾಲ್ಕು ವರ್ಷಗಳಿಂದ ಮದುವೆಗೆ ಬೇಕಾದ ವಸ್ತ್ರಗಳು, ತಾಳಿ ಮತ್ತು ಊಟದ ವೆಚ್ಚವನ್ನು ನಾನೇ ಭರಿಸಿ ಮಾದುವೆಗಳನ್ನು ಮಾಡಿಸುತ್ತಿದ್ದೇನೆ. ನಾನು ಅನಾಥ ಮಕ್ಕಳಿಗೆ ಮತ್ತು ಬಡವರಿಗೆ ಸಹಾಯ ಮಾಡುತ್ತಿದ್ದೇನೆ. ನಮಗೆ ವೈವಾಹಿಕ ಜೀವನ ಇಲ್ಲ. ಹೀಗಾಗಿ ಬಡವರಿಗೆ ಮದುವೆ ಮಾಡಿಸುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಇದ್ದರೆ ಇನ್ನು ಹೆಚ್ಚಿನ ರೀತಿಯಲ್ಲಿ ಒಳ್ಳೆ ಕಾರ್ಯಗಳನ್ನು ಮಾಡುತ್ತೇನೆ” ಎಂದು ಹೇಳಿದ್ದಾರೆ.
ಇನ್ನು ಮಂಗಳಮುಖಿ ಜಮುನಾ ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆನ್ನೂರು ಗ್ರಾಮದಲ್ಲಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ಮೊದಲ ಮಂಗಳಮುಖಿಯಾಗಿದ್ದರು.