ನ್ಯೂಸ್ ನಾಟೌಟ್: ಇತ್ತೀಚೆಗೆ ಜೆ.ಎನ್ 1 ತಳಿ ಪತ್ತೆಯಾದ ಬಳಿಕ ಕರ್ನಾಟಕದಲ್ಲಿ ಮತ್ತೋರ್ವ ಕೊರೋನಾ ಸೋಂಕಿತ(Coronavirus) ವ್ಯಕ್ತಿ ಕೊನೆಯುಸಿರೆಳೆದ ಘಟನೆ ಮಂಗಳುರಿನಲ್ಲಿ ಇಂದು(ಡಿ.22) ವರದಿಯಾಗಿದೆ.
ಉಸಿರಾಟದ ಸಮಸ್ಯೆಯಿಂದಾಗಿ ಮಂಗಳೂರಿನ(Mangaluru) ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರ ಭಾರತ ಮೂಲದ 40 ವರ್ಷದ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ದೃಢಪಡಿಸಿದೆ.
2 ದಿನಗಳ ಹಿಂದೆ ಮೃತ ವ್ಯಕ್ತಿಗೆ ಕೋವಿಡ್-೧೯ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ವೆನ್ಲಾಕ್ನ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು(ಡಿಸೆಂಬರ್ 22) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಆದರೆ, ಆತ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದ ಎನ್ನಲಾಗಿದೆ ಮತ್ತು ಆತ ಕೋವಿಡ್ ಪೀಡಿತನಾಗಿದ್ದರೂ ಕೋವಿಡ್ ನಿಂದಲೇ ಮೃತಪಟ್ಟಿದ್ದಾನೆ ಎಂಬುದನ್ನು ಆರೋಗ್ಯ ಇಲಾಖೆ ದೃಢಪಡಿಸಿಲ್ಲ.
ಕೋವಿಡ್ ಪೀಡಿತ ವ್ಯಕ್ತಿಯ ಸಾವು ಜನರಲ್ಲಿ ಆತಂಕ ಹೆಚ್ಚಿಸಿದೆ. ಹೊಸ ವರ್ಷ ಮತ್ತು ಕ್ರಿಸ್ಮಸ್ ಆಚರಣೆಗೆ ಬ್ರೇಕ್ ಬೀಳುತ್ತಾ ಎನ್ನುವ ಚರ್ಚೆಗಳು ಜೋರಾಗಿವೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ವಲಸೆ ಕಾರ್ಮಿಕನಾಗಿ ಮಂಗಳೂರಿಗೆ ಬಂದಿದ್ದ ವ್ಯಕ್ತಿ ಉಸಿರಾಟದ ತೊಂದರೆಯಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಕೋವಿಡ್ ನಿಂದಲೇ ಸಾವು ಆಗಿದೆಯಾ ಎಂದು ವೈದ್ಯರು ದೃಢಪಡಿಸಬೇಕಾಗಿದೆ ಎಂದಿದ್ದಾರೆ.
ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಪ್ರತ್ಯೇಕ ಗೈಡ್ಲೈನ್ಸ್ ಇಲ್ಲ. ಜನ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸಲು ಸಲಹೆ ಕೊಡುತ್ತೇವೆ. ಯಾವುದೂ ಕಡ್ಡಾಯ ಅಲ್ಲ, ನಾವು ಯಾವುದೇ ನಿರ್ಬಂಧ ವಿಧಿಸಲ್ಲ. ಕೊರೊನಾ ಉಪತಳಿ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಅಷ್ಟು ತೀವ್ರವಾಗಿಲ್ಲ. ಸೋಮವಾರ ಅಥವಾ ಮಂಗಳವಾರ ಸಂಪುಟ ಉಪಸಮಿತಿ ಸಭೆ ನಡೆಯಲಿದೆ. ಕೇಂದ್ರ ಮತ್ತು ಬೇರೆ ರಾಜ್ಯಗಳ ಮಾಹಿತಿ ಪಡೆದು ಬಳಿಕ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.