ನ್ಯೂಸ್ ನಾಟೌಟ್: ಲಾರಿ ಚಾಲಕನ ಅಜಾಗರುಕತೆಯ ಚಾಲನೆಗೆ ಲಾರಿಯು ಹೆದ್ದಾರಿ ಬಿಟ್ಟು ಸರ್ವೀಸ್ ರೋಡ್ ಗೆ ನುಗ್ಗಿ ಹೋಗಿದ್ದ ಘಟನೆ ಡಿ.೦೭ರಂದು ಮಂಗಳೂರು ಹೊರವಲಯದ ಮುಲ್ಕಿ ಎಂಬಲ್ಲಿಂದ ವರದಿಯಾಗಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಂಗಪ್ಪ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮುಲ್ಕಿಯ ಸರಣಿ ಅಪಘಾತದಲ್ಲಿ ಸ್ಕೂಟರ್ ಸವಾರ ಸಂಗಪ್ಪ ಗಂಭೀರ ಗಾಯಗೊಂಡಿದ್ದರು. ಮುಲ್ಕಿ ಬಪ್ಪನಾಡು ಬಳಿಯ ಅಪಾರ್ಟ್ ಮೆಂಟ್ ನಲ್ಲಿ ಸಂಗಪ್ಪ ಅವರು ವಾಚ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಕುಡಿತದ ಅಮಲಿನಲ್ಲಿ ಟ್ರಕ್ ಚಲಾಯಿಸಿದ್ದ ಚಾಲಕ ಧಾರವಾಡ ಮೂಲದ ಮಂಜುನಾಥ ಎಂಬಾತ ಅತೀ ವೇಗವಾಗಿ ಬಂದು ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ನುಗ್ಗಿಸಿದ್ದ.ಈ ವೇಳೆ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಸ್ಕೂಟರ್,ಆಟೋ ಹಾಗೂ ಪೊಲೀಸ್ ಸಿಬ್ಬಂದಿಗೆ ಲಾರಿ ಡಿಕ್ಕಿ ಹೊಡೆದಿದೆ.ಸರಣಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಂಗಪ್ಪ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗಾಯಗೊಂಡಿದ್ದ ಸಂಗಪ್ಪರ ಮಗಳು ಸವಿತಾ,ಆಟೋ ಚಾಲಕ ಧರ್ಮೇಂದ್ರ,ಪೊಲೀಸ್ ಸಿಬ್ಬಂದಿ ಗೀತಾ ಚೇತರಿಕೆ ಕಂಡಿದ್ದಾರೆಂದು ತಿಳಿದು ಬಂದಿದೆ.ಕುಡಿತದ ಅಮಲಿನಲ್ಲಿ ಟ್ರಕ್ ಚಲಾಯಿಸಿದ್ದ ಆರೋಪಿ ಮಂಜುನಾಥನನ್ನು ಪೊಲೀಸರು ನಿನ್ನೆಯೇ ಬಂಧಿಸಿದ್ದರು.ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.