ನ್ಯೂಸ್ ನಾಟೌಟ್: ಮಂಗಳೂರಿನ ಸೋಮೇಶ್ವರ ದೇವಸ್ಥಾನ ಬಳಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಾಗಿದೆ. ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಸೋಮೇಶ್ವರದಿಂದ ಘಟನೆ ವರದಿಯಾಗಿದೆ. ಕೇರಳ ಮೂಲದ ಅನ್ಯಕೋಮಿನ ವಿದ್ಯಾರ್ಥಿಗಳನ್ನು ಹಿಂದೂ ಕಾರ್ಯಕರ್ತರು ತಡೆದು ವಿಚಾರಿಸಿದ್ದಾರೆ.
ಇಬ್ಬರು ಹಿಂದೂ ಯುವತಿಯರು, ಓರ್ವ ಹಿಂದೂ ಯುವಕ ಮತ್ತು ಓರ್ವ ಮುಸ್ಲಿಂ ಯುವಕ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಸುತ್ತಮುತ್ತ ಓಡಾಡುತ್ತಿದ್ದರು. ದೇವಸ್ಥಾನಕ್ಕೆ ಆಗಮಿಸಿ ಸ್ಥಳೀಯವಾಗಿ ಸುತ್ತಾಡುತ್ತಿದ್ದ ವೇಳೆ ತಡೆದು ಅವರನ್ನು ಪ್ರಶ್ನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ನಾಲ್ವರು ಉಳ್ಳಾಲದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮುಸ್ಲಿಂ ಯುವಕ ದೇವಸ್ಥಾನಕ್ಕೆ ತೆರಳಿ ಹಣೆಗೆ ಗಂಧ ಹಚ್ಚಿಕೊಂಡು ಬಂದಿದ್ದ ಎನ್ನಲಾಗಿದೆ. ಇದೇ ವೇಳೆ ಮುಸ್ಲಿಂ ಯುವಕನ ಜೊತೆ ಇದ್ದ ಹಿಂದೂ ಯುವತಿಯ ತಡೆದು ಪ್ರಶ್ನಿಸಲಾಗಿದೆ. ಹಿಂದೂ ಕಾರ್ಯಕರ್ತರು ಪ್ರಶ್ನೆ ಮಾಡಿದ ವೇಳೆ ಮುಸ್ಲಿಂ ಯುವಕ ಎಂಬ ಮಾಹಿತಿ ದೊರಕಿದೆ. ಅನ್ಯಕೋಮಿನ ಜೋಡಿ ಎಂದು ಗೊತ್ತಾದ ಹಿನ್ನೆಲೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಯುವಕ-ಯುವತಿಯನ್ನ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ವಿಚಾರಣೆ ನಡೆಸಿ ಮಾಹಿತಿ ಪಡೆದು ಪೊಲೀಸರು ಅವರನ್ನು ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ.