ನ್ಯೂಸ್ ನಾಟೌಟ್ :ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆದರೆ ನನಗೆ ತುಂಬಾ ಸಂತೋಷ, ಆದರೆ ಆಗುವ ಪರಿಸ್ಥಿತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶನಿವಾರ(ಡಿ.೩೦) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತ ಸಮಾಜ ಖರ್ಗೆಯವರನ್ನು ನೋಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೆ ಎಂದಿದ್ದಾರೆ.
“ಇಂಡಿಯಾ ಒಕ್ಕೂಟದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಹೇಳಿದ್ದಾರೆ. ಅವರು ದಲಿತ ಎಂದಲ್ಲ, ಓರ್ವ ಕನ್ನಡಿಗ ಎಂದು ಈ ಘೋಷಣೆ ಮಾಡಿದ್ದಾರೆ. ಬೇರೆ ರಾಜ್ಯದವರು ಈ ರೀತಿ ಹೇಳಿದರೆ, ಅಹಿಂದ ನಾಯಕ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಮಾತ್ರ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದಿದ್ದಾರೆ,” ಎಂದು ಕಿಡಿಕಾರಿದರು.
ಡಾ. ಜಿ. ಪರಮೇಶ್ವರ್ 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಾಗ ಅವರನ್ನು ಮುಗಿಸಲು ಸಿದ್ದರಾಮಯ್ಯ ಪ್ರಯತ್ನ ಪಟ್ಟಿದ್ದರು. ಆದರೆ ಈಗ ಇಬ್ಬರೂ ಚೆನ್ನಾಗಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದು ಗೊತ್ತಿಲ್ಲ. ಸಿದ್ದರಾಮಯ್ಯ ದಲಿತ ಸಮಾಜ, ಅಹಿಂದ ಹೆಸರು ಹೇಳುತ್ತಾರೆ. ಅಧಿಕಾರ ಹಿಡಿಯುವವರೆಗೆ ಅವರಿಗೆ ಅಹಿಂದ, ನಂತರ ‘ಅಹಿಂದ ಹಿಂದೆ, ನಾನು ಮುಂದೆ’ ಇದು ಸಿದ್ದರಾಮಯ್ಯ ನೀತಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಾನು ಮಲ್ಲಿಕಾರ್ಜುನ ಖರ್ಗೆ ಪರವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ. ಆದರೆ ಕರ್ನಾಟದವರು ಪ್ರಧಾನಿ ಆದರೆ ನಮಗೆ ಸಂತೋಷ. ನಾನು ಎನ್ಡಿಎ ಒಕ್ಕೂಟದಲ್ಲಿ ಇರಬಹುದು. ಹಾಗಿದ್ದರೂ, ದೇಶದ ರಾಜಕಾರಣ ನನಗೆ ಗೊತ್ತು. ಖರ್ಗೆ ಪ್ರಧಾನಿ ಆಗುತ್ತಾರೋ, ಬಿಡುತ್ತಾರೋ ಬೇರೆ ಮಾತು. ಅವರು ಈ ದೇಶದ ಪ್ರಧಾನಿ ಆದರೆ ಸಂತೋಷ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಅವರು ಆಗುವ ಸಾಧ್ಯತೆ ಇಲ್ಲ. ಇದರ ನಡುವೆಯೂ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದು ಹೇಳಿ ಸಿದ್ದರಾಮಯ್ಯ ಸಂಕುಚಿತ ಮನೋಭಾವ ತೋರಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.