ನ್ಯೂಸ್ ನಾಟೌಟ್: ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಂಸದ ಡಿ.ಕೆ.ಸುರೇಶ್, ದೀಪಕ್ ಬೈಜ್ ಮತ್ತು ನಕುಲ್ ನಾಥ್ ಅಮಾನತುಗೊಳಿಸುವ ನಿರ್ಣಯವನ್ನು ಇಂದು(ಡಿ.21) ರಂದು ಮಂಡಿಸಿದರು.
ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಮತ್ತೆ ಮೂವರು ಕಾಂಗ್ರೆಸ್ ಸಂಸದರನ್ನು ಚಳಿಗಾಲ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಅಲ್ಲಿಗೆ ಲೋಕಸಭೆಯಿಂದ ಅಮಾನತಾದ ಸಂಸದರ ಒಟ್ಟು ಸಂಖ್ಯೆ 100ಕ್ಕೆ ಏರಿಕೆಯಾಗಿದೆ.
“ದೀಪಕ್ ಬೈಜ್, ಡಿ.ಕೆ.ಸುರೇಶ್, ನಕುಲ್ ನಾಥ್ ಸದನ ಮತ್ತು ಸಭಾಧ್ಯಕ್ಷರ ಗೌರವವನ್ನು ಸಂಪೂರ್ಣವಾಗಿ ಕಡೆಗಣಿಸಿ ಸದನದ ಬಾವಿಗೆ ಇಳಿದಿರುವುದನ್ನು ಈ ಸದನ ಗಂಭೀರವಾಗಿ ಪರಿಗಣಿಸಿದೆ. ಅಧಿವೇಶನದ ಉಳಿದ ಅವಧಿಗಾಗಿ ಅವರನ್ನು ಸದನದಿಂದ ಅಮಾನತುಗೊಳಿಸಬಹುದು” ಎಂದು ಜೋಶಿ ಹೇಳಿದ್ದಾರೆ.
ಇದಕ್ಕೂ ಮುನ್ನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸದನದಲ್ಲಿ ಪ್ರತಿಭಟನೆ ನಡೆಸದಂತೆ ಈ ಮೂವರು ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಇಂದು ಬೆಳಿಗ್ಗೆ ಸದನ ಸೇರುತ್ತಿದ್ದಂತೆಯೇ ಸಂಸದರ ಅಮಾನತು ಖಂಡಿಸಿ ತಮ್ಮ ಪ್ರತಿಭಟನೆ ಮುಂದುವರೆಸಿದ್ದರು. ಅಲ್ಲದೆ ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಚರ್ಚೆ ನಡೆಸುವಂತೆ ಮತ್ತು ಈ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವಂತೆ ಆಗ್ರಹಿಸಿದರು.
ಸೋನಿಯಾ ಗಾಂಧಿ ಈ ನಿರ್ಣಯವನ್ನು ಖಂಡಿಸಿದ್ದು, “ಭಾರಿ ಸಂಖ್ಯೆಯ ಸಂಸದರನ್ನು ಅಮಾನತು ಮಾಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಜಾಪ್ರಭುತ್ವದ ಕತ್ತು ಹಿ* ಸುಕಲಾಗಿದೆ ಎಂದು ಹೇಳಿದ್ದಾರೆ. ಭದ್ರತಾ ಲೋಪ ನಡೆದ ಡಿಸೆಂಬರ್ 13ರ ಘಟನೆಗಳ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಲಿ ಎಂಬುದು ಮಾತ್ರ ವಿಪಕ್ಷ ಸಂಸದರ ಒತ್ತಾಯವಾಗಿದೆ. ಆದರೆ ಸರ್ಕಾರ ಈ ಮನವಿಗೆ ಯಾವ ಮಟ್ಟದ ಅಹಂಕಾರದ ಉತ್ತರ ನೀಡಿದೆ ಎಂಬುದನ್ನು ವರ್ಣಿಸಲು ಪದಗಳಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.