ಸಂಪಾದಕೀಯ ಲೇಖನ: ಹೇಮಂತ್ ಸಂಪಾಜೆ
ಅದೊಂದು ಕಾಲವಿತ್ತು. ಆಗ ಸುಳ್ಯಕ್ಕೊಂದು ಸರಿಯಾದ ಆಸ್ಪತ್ರೆಯೇ ಇರ್ಲಿಲ್ಲ. ಮಕ್ಕಳ ಕಲಿಕೆಗೆ ಅಗತ್ಯವಾಗಿದ್ದ ಶಿಕ್ಷಣ ಸಂಸ್ಥೆಗಳೇ ಇರ್ಲಿಲ್ಲ. ಇನ್ನು ಊರಿನ ಯುವಕರ ಉನ್ನತ ಶಿಕ್ಷಣದ ಕನಸೋ.. ಗಗನ ಕುಸುಮವೇ ಆಗಿತ್ತು. ಸ್ವಲ್ಪ ಮೈಗೆ ಹುಷಾರಿಲ್ಲ ಅಂತ ಅಂದ್ರೂ ಔಷಧಿಗಾಗಿ ದೂರದ ಊರಿಗೆ ಜನ ಅಲೆದಾಡಬೇಕಿತ್ತು. ಹಳ್ಳಿ ಜನ ತಮ್ಮ ಮನೆಯ ವೃದ್ದರು, ಮಹಿಳೆಯರು, ಮಕ್ಕಳನ್ನು ಕರ್ಕೊಂಡು ಆಸ್ಪತ್ರೆಗೆ ಅಲೆದಾಡುವುದರಲ್ಲೇ ಹೈರಾಣಾಗಿ ಹೋಗುತ್ತಿದ್ರು. ಇದೆಲ್ಲವನ್ನು ದೂರದಲ್ಲಿ ಕುಳಿತು ಆ ವ್ಯಕ್ತಿಯೊಬ್ಬರು ಗಾಢವಾಗಿ ಗಮನಿಸುತ್ತಲೇ ಇದ್ರು. ತನ್ನೂರಿನ ಜನರ ನಿತ್ಯ ನೋವಿನ ವಿಚಾರದ ಗಂಭೀರ ಚಿಂತನೆ ಮಾಡಿದ್ರು. ಕೊನೆಗೂ ಅವರೊಂದು ಗಟ್ಟಿ ನಿರ್ಧಾರಕ್ಕೆ ಬಂದೇ ಬಿಟ್ರು. ಸುಳ್ಯದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿಗೆ ಮೊದಲ ಅಡಿಗಲ್ಲನ್ನು ಹಾಕಿಯೇ ಬಿಟ್ರು. ಸುಳ್ಯದ ಮಟ್ಟಿಗೆ ಅದೊಂದು ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ಐತಿಹಾಸಿಕ ಹೆಜ್ಜೆ. ಅಂದು ಆ ಮಹಾನ್ ಪುರುಷ ತೋರಿಸಿದ ದಿಟ್ಟ ನಡೆಯಿಂದ ಇಂದು ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿದೆ. ಆರೋಗ್ಯ ಸೇವೆಯ ಸಂಜೀವಿನಿಯಾಗಿದೆ. ಸಾವಿರಾರು ಉದ್ಯೋಗಿಗಳ ಜೀವನ ನಿರ್ವಹಣೆಗೊಂದು ದಾರಿಯಾಗಿದೆ. ಇದೆಲ್ಲವನ್ನು ಮಾಡಿದ್ದು ಒಬ್ಬರೇ ಒಬ್ಬರು.. ಅವರು ಬೇರ್ಯಾರೂ ಅಲ್ಲ, ಸುಳ್ಯದ ಶಿಕ್ಷಣ ಸಂಸ್ಥೆಗಳ ಸರದಾರ, ಶಿಕ್ಷಣ ಬ್ರಹ್ಮ, ಅಮರ ಶಿಲ್ಪಿ ದಿವಂಗತ ಕುರುಂಜಿ ವೆಂಕಟರಮಣ ಗೌಡರು.
ಕುರುಂಜಿ ವೆಂಕಟರಮಣ ಗೌಡರು ಸಾಮಾನ್ಯರಲ್ಲಿ ಅಸಾಮಾನ್ಯರು..ಈ ಮಾತನ್ನು ನಾನು ಯಾಕೆ ಇಲ್ಲಿ ಹೇಳ್ತಿದ್ದೀನಿ ಅಂದ್ರೆ ಸುಳ್ಯದಂತಹ ಸಣ್ಣ ಊರಿನಲ್ಲಿ ಅಂದು ನೆಹರೂ ಮೆಮೋರಿಯಲ್ ಕಾಲೇಜನ್ನು ಪ್ರಥಮವಾಗಿ ಆರಂಭಿಸುವ ಸಂಕಲ್ಪ ಮಾಡಿರೋದು ಸಣ್ಣ ವಿಷಯವೇನಲ್ಲ. ಇಂಥಹದ್ದೊಂದು ಸಾಧನೆಯನ್ನು ಅಂದಿನ ದಿನಗಳಲ್ಲಿ ಊಹಿಸಿಕೊಳ್ಳೋದು ಕಷ್ಟ. ಎಪ್ಪತ್ತರ ದಶಕದಲ್ಲಿ ಕುರುಂಜಿ ಗೌಡರು ನೆಹರೂ ಮೆಮೋರಿಯಲ್ ಕಾಲೇಜಿಗೆ ಪ್ರಥಮವಾಗಿ ಅಡಿಗಲ್ಲನ್ನು ಇಟ್ಟರು. ಇದನ್ನ ನೋಡಿದ ಕೆಲವರು ‘ಇದೆಲ್ಲ ಆಕೆ ಹೊಕೆ ಉಟ್ಟಾ, ಇವಂಗೆ ಬೇರೆ ಕೆಲ್ಸ ಇಲ್ಲೆ’ (ಇದೆಲ್ಲ ಆಗಲಿಕ್ಕೆ ಹೋಗಲಿಕ್ಕೆ ಉಂಟಾ, ಇವನಿಗೆ ಬೇರೆ ಕೆಲಸ ಇಲ್ಲ) ಅಂತ ಮಾತನಾಡಿಕೊಂಡಿದ್ದರಂತೆ. ಬೆನ್ನ ಹಿಂದೆ ಮಾತನಾಡುವವರು ತುಂಬಾ ಜನ ಇರ್ತಾರೆ. ಬೆನ್ನ ಮುಂದೆ ಬಂದು ಮಾತನಾಡುವುದಕ್ಕೂ ಒಂದು ಧೈರ್ಯ ಅಂತ ಬೇಕಲ್ವ..? ನಮ್ಮೂರ ಭಾಷೆಯಲ್ಲಿ ಹೇಳುವುದಾದ್ರೆ ‘ನಂಜಿ’ ಸ್ವಭಾವ. ಅವ ಉದ್ದಾರ ಆಕಿಲ್ಲೆ ಆಗೊರ್ನೂ ಬುಡಿಕ್ಕಿಲ್ಲೆ (ಅವನು ಉದ್ದಾರ ಆಗಲ್ಲ ಆಗುವವರನ್ನೂ ಬಿಡಲ್ಲ) ಇಂಥಹ ‘ನಂಜಿ’ ಸ್ವಭಾವದ ಜನ ಹೆಚ್ಚಿನ ಎಲ್ಲ ಕಡೆಯೂ ಇರ್ತಾರೆ. ಅಂತಹವರಿಂದ ಒಂದಷ್ಟು ಸವಾಲುಗಳು ಗೌಡರಿಗೆ ಎದುರಾದವು. ಬಂದ ಟೀಕೆ ಟಿಪ್ಪಣಿಗಳನ್ನು ಗೌಡ್ರು ವಿಷಕಂಠನಂತೆ ನುಂಗಿದ್ರು. ಬಂದಿದ್ದೆಲ್ಲ ಬರಲಿ ಆ ಗೋವಿಂದನ ದಯೆ ಇರಲಿ ಅಂತ ಮೌನವಾಗಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡೇ ಹೋದ್ರು. ನೆಹರೂ ಮೆಮೋರಿಯಲ್ ಕಾಲೇಜನ್ನು 1970ರ ದಶಕದಲ್ಲಿ ಆರಂಭಿಸಿದಾಗ ಇವರಿಗೆ ಹಲವು ಸವಾಲು ಎದುರಾದವು. ಮುಖ್ಯವಾಗಿ ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ನಿರಾಸಕ್ತಿ ಆರಂಭದಲ್ಲಿ ಸಮಸ್ಯೆಯಾಗಿ ಕಾಡಿದ್ದವು. ಕೆಲವು ಸಲ ಇದರಿಂದ ಮಾನಸಿಕವಾಗಿ ಒತ್ತಡ ಅನುಭವಿಸಿದರೂ ಕುರುಂಜಿ ಗೌಡರು ಇದರಿಂದ ಎಲ್ಲೂ ಕುಗ್ಗಲಿಲ್ಲ. ಕುರುಂಜಿ ವೆಂಕಟರಮಣ ಗೌಡರದ್ದು ಗಟ್ಟಿ ಗುಂಡಿಗೆ. ಇಂತಹ ನೂರಾರು ಸವಾಲುಗಳನ್ನು ಮೆಟ್ಟಿ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ತೆರಳಿ ಸಚಿವರ ಮುಂದೆ ಕೂತು ಇಲಾಖೆಗಳಿಂದ ವಿವಿಧ ಸಂಸ್ಥೆಗಳಿಗೆ ಅನುಮತಿ ಪಡೆಯುವಷ್ಟು ತಾಕತ್ತು ಅವರಿಗಿತ್ತು. ಇದರ ಫಲವೇ ಇಂದು ಆ ಒಂದು ಅಡಿಗಲ್ಲಿನಿಂದ ಲಕ್ಷಾಂತರ ಕಲ್ಲುಗಳಾಗಿ ದೊಡ್ಡ ದೊಡ್ಡ ಕಟ್ಟಡಗಳು ಸುಳ್ಯದಲ್ಲಿ ತಲೆ ಎತ್ತಿವೆ. ಇಡೀ ಒಂದು ಕ್ಯಾಂಪಸ್ ನಲ್ಲಿ ಅಲ್ಲಲ್ಲಿ ಆರೋಗ್ಯ ಸೇವೆ, ಶಿಕ್ಷಣ ಸೇವೆ ನಿತ್ಯ ನಿರಂತರವಾಗಿ ಸಾಗುತ್ತಿದೆ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಆರ್ಯುವೇದ ಕಾಲೇಜು, ಇಂಜಿನೀಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ನರ್ಸಿಂಗ್ ಕಾಲೇಜು ಸೇರಿದಂತೆ ಒಟ್ಟು ಮೂವತ್ತಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಕಟ್ಟಿ ಸಮಾಜಮುಖಿ ಕಾರ್ಯವನ್ನು ಮಾಡಿದರು. ಸಹಜವಾಗಿ ಮನುಷ್ಯನಿಗೆ ಧೈರ್ಯ ಇರುತ್ತೆ. ಆದರೆ ಭಂಡ ಧೈರ್ಯ ಅಂತ ಹೇಳ್ತಾರಲ್ಲ ಹಾಗೆ. ಭಂಡ ಧೈರ್ಯ ಅನ್ನುವುದರಲ್ಲಿ ತಪ್ಪಿಲ್ಲ. ಆ ಧೈರ್ಯ ಇದ್ದರಷ್ಟೇ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬಹುದು ಅನ್ನೋದನ್ನು ಈ ಸಮಾಜಕ್ಕೆ ಸಾರಿ ಹೇಳಿದ್ದಾರೆ. ನಾವೆಲ್ಲರೂ ಇವರ ಆದರ್ಶಗಳನ್ನು ಪಾಲಿಸೋಣ. ಮುಖ್ಯವಾಗಿ ಯುವಕರು ಇವರು ಸಾಗಿದ ಮಾರ್ಗದಲ್ಲಿ ನಡೆಯಲಿ ಎಂದು ಆಶಿಸೋಣ..ದಿವಂಗತ ಕುರುಂಜಿ ವೆಂಕಟರಮಣ ಗೌಡರ ಹೆಸರಿನಲ್ಲಿ ಪ್ರತಿ ವರ್ಷವೂ ಡಿಸೆಂಬರ್ 25/26ರಂದು ಕೆವಿಜಿ ಹಬ್ಬವನ್ನು ಸುಳ್ಯದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮುಂದಿನ ದಿನಗಳಲ್ಲಿ ಪ್ರತಿ ಮನೆಗಳಲ್ಲೂ ಆಚರಿಸುವಂತಾಗಲಿ ಎಂದು ಹಾರೈಸೋಣ.