ನ್ಯೂಸ್ ನಾಟೌಟ್ : ಹೊರಗೆ ಹೊರಡೋ ವೇಳೆ ಮಕ್ಕಳು ನಾನು ಬರುತ್ತೇನೆಂದು ಹೇಳೋದು ಸಾಮಾನ್ಯ.ಹೀಗೆ ಇಲ್ಲೊಬ್ಬರು ಅಜ್ಜ ಹಠ ಮಾಡಿದ್ದ ಮೊಮ್ಮಗನನ್ನು ಕರೆದುಕೊಂಡು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಏರಿ ಸೀಟು ಹಿಡಿದು ಜತೆಗೆ ಕೂರಿಸಿಕೊಂಡಿದ್ದರು. ಬಸ್ ಮುಂದಕ್ಕೆ ಸಾಗುತ್ತಿದ್ದಂತೆ ಇತ್ತ ಅಜ್ಜನಿಗೆ ಜೋರು ನಿದ್ದೆ ಬರಲಾರಂಭಿಸಿದೆ. ತೂಕಡಿಸಿ ತೂಕಡಿಸಿ ನಿದ್ದೆಗೆ ಮಾಡಿದರು. ನಿದ್ದೆ ಮುಗಿಸಿ ಕಣ್ಣು ಬಿಟ್ಟರೆ ಮೊಮ್ಮಗ ನಾಪತ್ತೆಯಾಗಿದ್ದ..! ಈ ವೇಳೆ ಜೋರಾಗಿ ಬೊಬ್ಬೆ ಹಾಕಲಾರಂಭಿಸಿದ ಅಜ್ಜ,ಅತ್ತಿಂದಿತ್ತ ಹುಡುಕಾಡಲು ಶುರು ಮಾಡಿದರು.ಆದರೆ 3 ವರ್ಷದ ಶ್ರೇಯಸ್ ಬಸ್ಸಿನಲ್ಲಿ ಕಾಣಿಸಲೇ ಇಲ್ಲ..!
ಅಜ್ಜ ನಿದ್ರೆಗೆ ಜಾರಿದಂತೆಯೇ ಬಸ್ವೊಳಗೆ ಅತ್ತಿಂದಿತ್ತ ಆಟವಾಡುತ್ತಿದ್ದ ಶ್ರೇಯಸ್, ಬಸ್ ನಿಲ್ಲಿಸಿದಾಗ ಏಕಾಏಕಿ ಕೆಳಗೆ ಇಳಿದು ಹೋಗಿದ್ದ. ಚಿಕ್ಕಮಗಳೂರಿನ ತರೀಕೆರೆ ಮಾರ್ಗವಾಗಿ ಹೊರಟಿದ್ದ ಮತ್ತೊಂದು ಬಸ್ ಹತ್ತಿದ್ದ ಎಂದು ತಿಳಿದು ಬಂದಿದೆ.ನಂತರ ಜತೆಗೆ ಅಜ್ಜ ಇಲ್ಲದೇ ಇರುವುದು ಗಮನಕ್ಕೆ ಬಂದಾಗ ತರೀಕೆರೆಯಲ್ಲಿ ಬಸ್ಸಿನಲ್ಲಿ ಒಂದೇ ಸಮನೇ ಅಳುತ್ತಿದ್ದ.ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕನನ್ನು ಠಾಣೆಗೆ ಕರೆದು ಹೋಗಿದ್ದಾರೆ. ಶ್ರೇಯಸ್ ತನ್ನ ಹೆಸರು ಬಿಟ್ಟು ಬೇರೆ ಯಾವುದೇ ಮಾಹಿತಿ ನೀಡದೇ ಇದ್ದಾಗ, ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹರಿಬಿಟ್ಟಿದ್ದಾರೆ.
ಬಳಿಕ ಪೊಲೀಸ್ ಠಾಣೆಗೆ ಬಂದು ಪೋಷಕರು ಮಗುವನ್ನು ಹಿಂಪಡೆದಿದ್ದಾರೆ. ಶ್ರೇಯಾಸ್ ತರೀಕೆರೆ ತಾಲೂಕಿನ ತಣಿಗೆ ಬೈಲು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಪೊಲೀಸರು ಹಾಗೂ ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.