ನ್ಯೂಸ್ ನಾಟೌಟ್: ಮುಸ್ಲಿಂ ಮಹಿಳೆಯರ ವಿರುದ್ಧ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ಭಟ್ ನೀಡಿದ ಅವಹೇಳನಕಾರಿ ಹೇಳಿಕೆ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ (ಡಿ.28)ಗುರುವಾರ ಆದೇಶಿಸಿದೆ ಎಂದು ವರದಿ ತಿಳಿಸಿದೆ.
ಪ್ರ ಕರಣ ರದ್ದು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ್ದ ಅರ್ಜಿ ನ್ಯಾ. ರಾಜೇಶ್ ರೈ ಅವರಿದ್ದ ರಜಾ ಕಾಲದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ಅರ್ಜಿದಾರರ ಪರ ವಾದ ಆಲಿಸಿದ ಬಳಿಕ ನ್ಯಾಯಾಲಯ, ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳಬಾರದು ” ಎಂದು ಸರಕಾರದ ಪರ ಎಸ್ಪಿಪಿಗೆ ಸೂಚನೆ ನೀಡಿತು. ಕಲ್ಲಡ್ಕ ಪ್ರಭಾಕರ ಭಟ್ ಬಂಧನ ಭೀತಿಯಿಂದ ಸದ್ಯ ಪಾರಾಗಿದ್ದಾರೆ ಎನ್ನಲಾಗಿದ್ದು,
ಅಲ್ಲದೆ, ಪ್ರತಿವಾದಿ ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ ಎನ್ನಲಾಗಿದೆ.
ಪ್ರಭಾಕರ ಭಟ್ ಪರ ವಾದಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಕಲ್ಲಡ್ಕ ಪ್ರಭಾಕರ್ಭಟ್ ವಿರುದ್ದ ಎಫ್ಐಆರ್ ದಾಖಲಿಸಿರುವುದಕ್ಕೆ ರಾಜಕೀಯ ಪ್ರೇರಿತ ಕಾರಣವಿದೆ. ಅವರು ಯಾವುದೇ ಪ್ರಚೋದನಕಾರಿ ಅಥವಾ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ವಾಸ್ತವ ಅಂಶಗಳ ಬಗ್ಗೆ ಮಾತನಾಡಿದ್ದಾರೆ ಎಂದು ವಾದಿಸಿದ್ದಾರೆ.
ಭಾನುವಾರ ಮಂಡ್ಯ ಜಿಲ್ಲೆಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್, ಈ ಹಿಂದೆ ತಲಾಖ್ ತಲಾಖ್ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗುತ್ತಿದ್ದ. ನಿಮಗೆ ಕಾಯಂ ಗಂಡನನ್ನು ಕೊಟ್ಟಿದ್ದೇ ಮೋದಿ ಸರಕಾರ. ತಲಾಖ್ ರದ್ದು ಮಾಡಿ ನಿಮಗೆ ಗೌರವ ತಂದುಕೊಟ್ಟಿದ್ದೇ ಹಿಂದೂ ಧರ್ಮ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆ ಕುರಿತು ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 354, 294, 509, 153, 295, 295 ಎ, 298ರಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಹಾಗಾಗಿ, ಪ್ರಭಾಕರ್ಭಟ್ ಬಂಧನ ಭೀತಿ ಎದುರಿಸುತ್ತಿದ್ದರು ಈಗ ರಿಲೀಫ್ ಸಿಕ್ಕಿದೆ ಎನ್ನಲಾಗಿದೆ.