ನ್ಯೂಸ್ ನಾಟೌಟ್ : ಅಂತರ್ಜಾತಿ ವಿವಾಹಗಳು ನಡೆಯುತ್ತಿದ್ದು, ಜಾತಿಗಳ ನಡುವಿನ ಸಾಮಾಜಿಕ ಅಸಮಾನತೆ ಮತ್ತು ಮೂಡ ನಂಬಿಕೆಗಳನ್ನು ತೊಡೆದು ಹಾಕಲು ಸರ್ಕಾರ ಅಂತರ್ಜಾತಿ ವಿವಾಹವಾದವರಿಗೆ ಪ್ರೋತ್ಸಾಹ ಧನ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತದೆ.
ಈ ರೀತಿಯಲ್ಲಿ ವಿವಾಹವಾಗುತ್ತಿರುವ ದಂಪತಿಗಳಿಗೆ ಪ್ರೋತ್ಸಾಹ ಧನ ನೀಡಲು ಸರ್ಕಾರಕ್ಕೆ ಅನುದಾನ ಕೊರತೆ ಎದುರಾಗಿದೆ ಎಂದು ವರದಿ ತಿಳಿಸಿದೆ. ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನಕ್ಕೆಕಳೆದ 5 ವರ್ಷಗಳಲ್ಲಿ 20,365 ಅರ್ಜಿ ಸಲ್ಲಿಕೆಯಾಗಿದೆ. ಆದರೆ ಅನುದಾನ ಬಿಡುಗಡೆಯಾಗಿದ್ದು 521 ಕೋಟಿ ಮಾತ್ರ. ಪ್ರೋತ್ಸಾಹ ಧನಕ್ಕೆ ಅನುದಾನದ ಕೊರತೆ ಬಗ್ಗೆ ಸರ್ಕಾರವೂ ಒಪ್ಪಿಕೊಂಡಿದೆ ಎನ್ನಲಾಗಿದೆ.
ವಿಧಾನಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ನೀಡಲು ಅನುದಾನದ ಕೊರತೆಯ ಬಗ್ಗೆ ಒಪ್ಪಿಕೊಂಡಿದೆ. ಅನುದಾನ ಬೇಡಿಕೆಗೆ ಅನುಗುಣವಾಗಿ ಇದೆಯಾ? ಅಥವಾ ಅನುದಾನದ ಕೊರತೆ ಇದೆಯಾ ಎಂಬ ಪ್ರಶ್ನೆಗೆ, ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ವಲಯ ಹಾಗೂ ಕೇಂದ್ರ ವಲಯದಿಂದ ಅನುದಾನ ಒದಗಿಸುತ್ತಿದ್ದು, ಪ್ರೋತ್ಸಾಹ ಧನಕ್ಕಾಗಿ ಸ್ವೀಕೃತವಾಗಿರುವ ಅರ್ಜಿಗಳಲ್ಲಿ ಅರ್ಹವಿರುವ ಎಲ್ಲರಿಗೂ ಪ್ರೋತ್ಸಾಹ ಧನ ನೀಡಲು ಅನುದಾನದ ಕೊರತೆ ಇದೆ ಎಂದು ಇಲಾಖೆ ಒಪ್ಪಿಕೊಂಡಿದೆ.
ಈ ಯೋಜನೆಯಡಿ ವಿವಾಹ ಅರ್ಹವಾದರೆ ಪ್ರೋತ್ಸಾಹ ಧನ ರೂ. 200000 / – ಸಾಮಾನ್ಯ ಜಾತಿಯ ಯುವಕರಿಂದ ಪರಿಶಿಷ್ಟ ಜಾತಿಗೆ ಸೇರಿದ ಯುವಕ/ಯುವತಿಯರೊಂದಿಗೆ ಅಂತರ್ಜಾತಿ ವಿವಾಹಗಳಿಗೆ ನೀಡಲಾಗುತ್ತದೆ.
ಅರ್ಜಿದಾರರು ತಮ್ಮ ಮದುವೆಯನ್ನು ಕಲೆಕ್ಟರೇಟ್ನಲ್ಲಿ ಹಿಂದೂ ವಿವಾಹ ಕಾಯ್ದೆ 1955 ರ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಅಲ್ಲದೆ, ಮದುವೆಯ ದಿನಾಂಕದ ಒಂದು ವರ್ಷದೊಳಗೆ ನಿಮ್ಮ ಸಂಪೂರ್ಣ ಅರ್ಜಿಯನ್ನು ಅಗತ್ಯವಿರುವ ಎಲ್ಲಾ ಪತ್ರಗಳೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.