ನ್ಯೂಸ್ ನಾಟೌಟ್ :ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಸರಿಯಿಲ್ಲ.ಈ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತಲೇ ಇರುತ್ತವೆ. ಆದರೆ ಪಾಕಿಸ್ತಾನದ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಎಂಬಂತೆ ಹಿಂದೂ ಮಹಿಳೆಯೊಬ್ಬರು ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಭಾರಿ ಸುದ್ದಿಯಾಗಿದ್ದಾರೆ.ಈ ಬಗ್ಗೆ ಪಾಕಿಸ್ತಾನದ ಸುದ್ದಿ ಸಂಸ್ಥೆ ಡಾನ್ ವರದಿ ಮಾಡಿದೆ.
ಪಾಕಿಸ್ತಾನದ 16 ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರ ಚುನಾವಣೆಗೆ ಫೆಬ್ರವರಿ 8, 2024 ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಅನ್ನೋದು ವಿಶೇಷ.ಅಂದ ಹಾಗೆ ಈ ಮಹಿಳೆಯ ಹೆಸರು ಸವೇರಾ ಪ್ರಕಾಶ್, ಅವರು ಬುನೇರ್ ಜಿಲ್ಲೆಯ PK-25 ರ ಸಾಮಾನ್ಯ ಸ್ಥಾನಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿ ಇದೀಗ ಸಂಚಲನ ಸೃಷ್ಟಿಸಿದ್ದಾರೆ.
ಡಾನ್ ವರದಿಯ ಪ್ರಕಾರ, ಪಾಕಿಸ್ತಾನದ ಚುನಾವಣಾ ಆಯೋಗದ (ECP) ಇತ್ತೀಚಿನ ತಿದ್ದುಪಡಿಗಳು ಸಾಮಾನ್ಯ ಸ್ಥಾನಗಳಲ್ಲಿ ಐದು ಪ್ರತಿಶತ ಮಹಿಳಾ ಅಭ್ಯರ್ಥಿಗಳನ್ನು ಸೇರಿಸುವುದನ್ನು ಕಡ್ಡಾಯಗೊಳಿಸಿದೆ. ಹಿಂದೂ ಸಮುದಾಯದ 35 ವರ್ಷದ ಸವೇರಾ ಪ್ರಕಾಶ್, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್ ಮೂಲಕ ಸ್ಪರ್ಧಿಸಲು ತನ್ನ ತಂದೆ ಇತ್ತೀಚೆಗೆ ನಿವೃತ್ತರಾದ ವೈದ್ಯ ಮತ್ತು ಹಿಂದೆ ಪಿಪಿಪಿಯ ಸಮರ್ಪಿತ ಸದಸ್ಯ ಓಂ ಪ್ರಕಾಶ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಸೋಮವಾರದ ಡಾನ್ ವರದಿಯ ಪ್ರಕಾರ, ಕ್ವಾಮಿ ವತನ್ ಪಾರ್ಟಿಯೊಂದಿಗೆ ಸಂಬಂಧ ಹೊಂದಿರುವ ಸ್ಥಳೀಯ ರಾಜಕಾರಣಿ ಸಲೀಂ ಖಾನ್, ಬುನರ್ನಿಂದ ಮುಂಬರುವ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಮೊದಲ ಮಹಿಳೆ ಪ್ರಕಾಶ್ ಎಂದು ಹೇಳಿದ್ದಾರೆ.
ಇವರು ಅಬೋಟಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನಿಂದ 2022 ರ ಪದವೀಧರರು. ಸವೇರಾ ಪ್ರಕಾಶ್ ಅವರು ಪ್ರಸ್ತುತ ಬುನರ್ನಲ್ಲಿ ಪಿಪಿಪಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯದ ಕಲ್ಯಾಣಕ್ಕಾಗಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತಾ, ಮಹಿಳೆಯರ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ.
ಅಭಿವೃದ್ಧಿ ಕ್ಷೇತ್ರದಲ್ಲಿ ಮಹಿಳೆಯರ ನಿರ್ಲಕ್ಷ್ಯ ಮತ್ತು ದಬ್ಬಾಳಿಕೆಗೆ ಒತ್ತು ನೀಡಿ ಅದರ ವಿರುದ್ಧ ಧ್ವನಿಯೆತ್ತಿದ್ದಾರೆ.ಈ ಸಮಸ್ಯೆಗಳನ್ನು ಪರಿಹರಿಸುವುದೇ ಅವರ ಮೂಲ ಗುರಿಯಾಗಿದೆ.ಸಂದರ್ಶನದಲ್ಲಿ ಸವೇರಾ ಪ್ರಕಾಶ್ ಅವರು ತಮ್ಮ ತಂದೆಯ ಹಾದಿಯನ್ನು ಅನುಸರಿಸುವ ಮತ್ತು ಈ ಪ್ರದೇಶದಲ್ಲಿ ಹಿಂದುಳಿದವರಿಗಾಗಿ ಕೆಲಸ ಮಾಡುವ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ್ದಾರೆ. ಡಿ.23ರಂದು ನಾಮಪತ್ರ ಸಲ್ಲಿಸಿದ ಅವರು, ಪಿಪಿಪಿಯ ಹಿರಿಯ ನಾಯಕತ್ವ ತಮ್ಮ ಉಮೇದುವಾರಿಕೆಗೆ ಬೆಂಬಲ ನೀಡಲಿದೆ ಎಂದು ಆಶಿಸಿದರು.ವೈದ್ಯಕೀಯ ಹಿನ್ನೆಲೆಯುಳ್ಳ ರಾಜಕೀಯ ಜಗತ್ತಿಗೆ ಬಂದಿರುವ ಸವೇರ ಪ್ರಕಾಶ್, ‘ಮಾನವೀಯತೆಯ ಸೇವೆ ನನ್ನ ರಕ್ತದಲ್ಲಿದೆ’ ಎಂದು ಒತ್ತಿ ಹೇಳಿದರು. ಚುನಾಯಿತ ಶಾಸಕರಾಗುವ ಅವರ ಕನಸು ವೈದ್ಯಕೀಯ ವೃತ್ತಿಜೀವನದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಕಳಪೆ ನಿರ್ವಹಣೆ ಮತ್ತು ಅಸಹಾಯಕತೆಯ ಮೊದಲ ಅನುಭವದಿಂದ ಹುಟ್ಟಿಕೊಂಡಿತು.