ನ್ಯೂಸ್ ನಾಟೌಟ್: ಪಾಳುಬಿದ್ದ ಮನೆಯೊಂದರಲ್ಲಿ ಮೂರು ಅಸ್ಥಿಪಂಜರಗಳು ಸಿಕ್ಕಿವೆ. ಈ ಮನೆಯು ಪಿಡಬ್ಲ್ಯೂಡಿ ಇಲಾಖೆಯ ಮಾಜಿ ಇಂಜಿನಿಯರ್ ಒಬ್ಬರ ಮನೆಯಾಗಿದ್ದು, ಅದೇ ಮನೆಯಲ್ಲಿ ಅಸ್ಥಿಪಂಜರಗಳು ಸಿಕ್ಕಿರುವ ಘಟನೆ ಕೋಟೆನಾಡು ಚಿತ್ರದುರ್ಗ ನಗರದಿಂದ ಚಳ್ಳಕೆರೆಗೆ ಹೋಗುವ ಮಾರ್ಗದಲ್ಲಿ ಚಳ್ಳಕೆರೆ ಗೇಟ್ ನ ಸಮೀಪ ನಡೆದಿದೆ.
ಹಳೆ ಬೆಂಗಳೂರು ರಸ್ತೆಯಲ್ಲಿರುವ ‘ಜಗನ್ನಾಥ ರೆಡ್ಡಿ ಸಮೀಲ್ ಇಂಜಿನಿಯರ್ ದೊಡ್ಡ ಸಿದ್ದನಹಳ್ಳಿ ಗ್ರಾಮ’ ಎಂಬ ನಾಮಫಲಕ ಹೊಂದಿರುವ ಮನೆಯಲ್ಲಿ ಈ ಅಸ್ಥಿಪಂಜರಗಳು ಪತ್ತೆಯಾಗಿವೆ. ಮನೆಯೊಳಗೆ ಇಣುಕಿ ನೋಡಿದ ಕೆಲವು ಜನರಿಗೆ ಈ ಅಸ್ಥಿಪಂಜರಗಳು ಕಂಡು ಬೆಚ್ಚಿಬಿದ್ದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್, ಪಿಎಸ್ಐ ರಘು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ನಗರದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೂಡಲೇ ಅಸ್ಥಿಪಂಜರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ತೆಗೆಯಲು ಮುಂದಾಗಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ ಸದರಿ ಮನೆಯ ನಿವಾಸಿಗಳು ನವೆಂಬರ್ 2022 ರಿಂದ ಯಾರಿಗೂ ಸಹ ಕಾಣದೆ ಇರುವುದು ಕಂಡುಬಂದಿರುತ್ತದೆ ನವೆಂಬರ್ ನಂತರದ ದಿನಗಳಲ್ಲಿ ಮನೆಯ ಸುತ್ತಮುತ್ತ ಸ್ವಲ್ಪ ದುರ್ವಾಸನೆ ಬಂದಂತಹ ಸ್ಥಿತಿಯಿತ್ತು ನಾವು ಯಾವುದೋ ಪ್ರಾಣಿ ಸ* ತ್ತಿರುವ ವಾಸನೆ ಬರುತ್ತದೆ ಎಂದು ತಿಳಿದುಕೊಂಡಿದ್ದೆವು ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.
ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರು ತನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು 2 ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರಂತೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇದರಿಂದ ಬೇಸತ್ತು ಯಾರ ಸಂಪರ್ಕಕ್ಕೆ ಸಿಕ್ಕಿರಲಿಲ್ಲಂತೆ. ಮನೆಗೆ ಯಾರೇ ಬಂದರೂ ಬಾಗಿಲು ತೆಗೆಯದೆ ಕಿಟಕಿಯಲ್ಲಿ ಮಾತಾಡಿಸಿ ಕಳುಹಿಸಿದ್ದರು ಎನ್ನಲಾಗಿದೆ.
ಮನೆಯ ಕೊಠಡಿ ಒಳಗಡೆ ಇರುವ ಮಂಚದ ಮೇಲೆ ಒಂದು ಅಸ್ಥಿಪಂಜರ, ನೆಲದ ಮೇಲೆ ಹಾಗೂ ಬಾಗಿಲು ಹಿಂದೆ ಅಸ್ಥಿ ಪಂಜರ ಕಂಡು ಬಂದಿದ್ದು, ಅಸ್ಥಿಪಂಜರ ಬಳಿ ಆಕ್ಸಿಜನ್ ಸಿಲಿಂಡರ್ ಕಂಡು ಬಂದಿವೆ. ಜಗನ್ನಾಥ ರೆಡ್ಡಿ, ಕೃಷ್ಣಾರೆಡ್ಡಿ, ಜಗನ್ನಾಥ ರೆಡ್ಡಿ ಪತ್ನಿಯ ಅಸ್ಥಿಪಂಜರಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.