ನ್ಯೂಸ್ ನಾಟೌಟ್: ಬಿಜೆಪಿ ಸರ್ಕಾರ ಇರುವಾಗ ರದ್ದಾದ ಹಿಜಾಬ್ ಮತ್ತೆ ಶಿಕ್ಷಣ ಸಂಸ್ಥೆಯೊಳಗೆ ತರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶರಣ್ ಪಂಪ್ ವೆಲ್, ಇಂತಹ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕುವುದು ಬೇಡ. ಹಿಜಾಬ್ ರದ್ದತಿಯನ್ನು ವಾಪಸ್ ಪಡೆದದ್ದೇ ಆದಲ್ಲಿ ಕರ್ನಾಟಕದ ಎಲ್ಲಾ ಶಾಲಾ ಕಾಲೇಜುಗಳು ಕೇಸರಿಮಯವಾಗಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ಗಲಭೆ ಇಡೀ ರಾಜ್ಯದಲ್ಲಿ ಸಾಕಷ್ಟು ಸಂಘರ್ಷ ಸೃಷ್ಟಿಸಿತ್ತು. ಕೇವಲ ಐದು ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಪ್ರತಿಭಟನೆ ನಡೆಸಿದ್ದಕ್ಕೆ ಪಿಎಫ್ಐ, ಎಸ್ ಡಿಪಿಐ ಬೆಂಬಲ ನೀಡಿತ್ತು. ಈ ಬೆಂಬಲದಿಂದಲೇ ಕರ್ನಾಟಕದಾದ್ಯಂತ ಘರ್ಷಣೆ ಸಂಭವಿಸಿತ್ತು. ಇದೀಗ ಪಿಎಫ್ಐ ಬ್ಯಾನ್ ಆದರೂ ಅವರ ಮಾನಸಿಕತೆ ಮುಂದುವರಿಯುತ್ತಿದೆ. ಪಿಎಫ್ಐಗೆ ಬೆಂಬಲ ಕೊಡುವ ಕಾರ್ಯವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಆದ್ದರಿಂದ ಪಿಎಫ್ಐ ಬದಲು ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ ಎಂಬ ಸಂಶಯ ಬಲವಾಗುತ್ತಿದೆ ಎಂದಿದ್ದಾರೆ.
ಈಗಾಗಲೇ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಹಿಜಾಬ್, ಬುರ್ಖಾ ಧರಿಸಿ ಬರಲು ಅವಕಾಶ ಕೊಡುತ್ತೇವೆ. ಹಿಜಾಬ್ ಆದೇಶ ರದ್ದು ಮಾಡುತ್ತೇವೆ ಎಂಬ ಹೇಳಿಕೆ ಕೊಡುವ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಮತಾಂಧತೆಯ ವಿಷಬೀಜ ಬಿತ್ತುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯನವರು ಓಟಿಗಾಗಿ, ತುಷ್ಟೀಕರಣಕ್ಕಾಗಿ ಒಂದು ವರ್ಗದವರನ್ನು ಮೆಚ್ಚಿಸಲು ಹೊರಟಿದ್ದಾರೆ. ಇದು ಸರಿಯಲ್ಲ. ಆರಂಭದಲ್ಲಿ ಈ ಸರಕಾರ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದರು. ಆದರೆ ಈಗ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಾಕಲು ಹೊರಟಿದ್ದಾರೆ. ಆದ್ದರಿಂದ ಈ ಹಿಜಾಬ್ ರದ್ದತಿ ಆದೇಶ ವಾಪಸ್ ತೆಗೆದುಕೊಳ್ಳುವುದನ್ನು ಬಲವಾಗಿ ವಿರೋಧಿಸುತ್ತೇವೆ ವಿಶ್ವ ಹಿಂದೂ ಪರಿಷತ್ ಮುಖಂಡ ಹೇಳಿಕೆ ನೀಡಿದ್ದಾರೆ.