ನ್ಯೂಸ್ ನಾಟೌಟ್ : ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಆದಿಚುಂಚನಗಿರಿಗೆ ಯುವ ರೈತರು ಪಾದಾಯಾತ್ರೆ ಹಮ್ಮಿಕೊಂಡಿದ್ದರು. ಆದರೆ ಈಗ ಬ್ರಾಹ್ಮಣ ಯುವಕರಿಗೂ ಹುಡುಗಿಯರು ಸಿಗುತ್ತಿಲ್ಲವೆಂಬ ಸುದ್ದಿ ಜೋರಾಗಿದೆ. ಬ್ರಾಹ್ಮಣ ಸಮುದಾಯದ ಕೆಲ ಯುವಕರು ಅನಾಥಾಶ್ರಮದಲ್ಲಿ ಬೆಳೆದ ಹುಡುಗಿಯರನ್ನು ಮದುವೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಬ್ರಾಹ್ಮಣ ಸಮುದಾಯದಲ್ಲಿ ಮದುವೆಯಾಗಲು ಹುಡುಗಿಯರ ಕೊರತೆ ಎದುರಾಗಿ ಹಲವು ವರ್ಷಗಳೇ ಕಳೆದಿವೆ. ಆದ್ದರಿಂದ ಮದುವೆಯಾಗಲು ಹೆಣ್ಣು ಸಿಗದ ಹಿನ್ನೆಲೆಯಲ್ಲಿ ಬ್ರಾಹ್ಮಣ ಯುವಕರು ಅನಾಥ ಹೆಣ್ಣು ಮಕ್ಕಳ ಪಾಲನೆ ಮಾಡುವ ಸ್ಟೇಟ್ ಹೋಮ್ಗಳಿಗೆ ಹೋಗಿ ಹೆಣ್ಣು ಕೇಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳ ಯುವಕರ ವಿಶೇಷ ಆಸಕ್ತಿಯಿಂದ ಅನಾಥ ಹೆಣ್ಣು ಮಕ್ಕಳಿಗೆ ಒಂದು ಉತ್ತಮ ಕುಟುಂಬ ಹಾಗೂ ಜೀವನ ಸಿಗುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಹಲವರಿಂದ ಪ್ರಶಂಸೆ ವ್ಯಕ್ತವಾಗಿದೆ.
ಬುಧವಾರ(ಡಿ.೨೦) ಉಡುಪಿ ಸ್ಟೇಟ್ ಹೋಂನಲ್ಲಿ ಎರಡು ಅನಾಥ ಯುವತಿಯರಿಗೆ ಕಂಕಣ ಭಾಗ್ಯ ನೆರವೇರಿಸಲಾಗಿದ್ದು, ಇನ್ನು ಅನಾಥಾಶ್ರಮದ ಹೆಣ್ಣು ಮಕ್ಕಳನ್ನು ಮದುವೆ ಆಗುವ ವರ್ಗ ಹೆಚ್ಚಾಗಿ ಅರ್ಚಕ ವರ್ಗದವರೇ ಆಗಿದ್ದಾರೆ. ಇಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಮದುವೆಯಾಗದ ಹೊರತು ಕೆಲ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವಂತಿಲ್ಲ. ಆದರೆ, ಅರ್ಚಕ, ಪೌರೋಹಿತ್ಯ ವೃತ್ತಿ ಮಾಡುವವರಿಗೆ ಬ್ರಾಹ್ಮಣ ಸಮುದಾಯದಲ್ಲಿ ಹೆಣ್ಣಿನ ಕೊರತೆಯಾಗಿದೆ. ಹೀಗಾಗಿ, ಅನಾಥ ಹೆಣ್ಣು ಮಕ್ಕಳನ್ನು ಮದುವೆಯಾಗಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಅಂತರ್ಜಾತೀಯವಾಗಿ ಅರ್ಚಕ ವೃತ್ತಿ ಮಾಡುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ಟ ಮತ್ತು ಕುಮಾರಿ ವಿವಾಹ ನೆರವೇರಿತ್ತು.